ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅರ್ಥಪೂರ್ಣ ಆಚರಣಗೆ ಕರೆ
ಕೋಲಾರ, ಸೆ,೧೪-ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇದೇ ಸೆ ೧೫ ರಂದು ಮಾನವ ಸರಪಳಿ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಹಮ್ಮಿಕೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಡೆದ ಅಂತಿಮ ಹಂತದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ ೧೫ ಮುಂಜಾನೆ ೯ ಗಂಟೆಗೆ ಜಿಲ್ಲೆಯ ಚಿಕ್ಕೊಡಹಳ್ಳಿ ಗ್ರಾಮದಿಂದ ವೆಂಕಟಾಪುರ ಗ್ರಾಮದ ವರೆಗೆ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ಜರಗುತ್ತಿದ್ದು ಕೋಲಾರ ತಾಲೂಕಿನಲ್ಲಿ ಮಾನವ ಸರಪಳಿ ಹಾದು ಹೋಗುತ್ತಿದ್ದು ಪ್ರತಿ ಕಿಲೋ ಮೀಟರ್ ಗೆ ಒಬ್ಬರು ನೂಡಲ್ ಅಧಿಕಾರಿಯನ್ನು ನೇಮಿಸಿ, ಮುಖ್ಯ ವೃತ್ತಗಳಲ್ಲಿ ತೋರಣ ,ಬ್ಯಾನರ್ ಹಾಕಿಸಿ ಮಾನವ ಸರಪಳಿ ನಿರ್ಮಿಸಿ ೧೦೦ ಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಸೇರಿಸಿ ಸಂವಿಧಾನದ ಪೀಠಿಕೆ ಓದಿಸಿ, ರಾಷ್ಟ್ರಗೀತೆ ಯನ್ನು ಹಾಡಿಸಬೇಕು ಎಂದು ಹೇಳಿದರು.
ತಾಲೂಕಿನ ತಹಶಿಲ್ದಾರರು ಮತ್ತು ತಾ.ಪಂ ಕಾರ್ಯನಿರ್ವಾಹಕರು ಒಳಗೊಂಡು ಸಂಪೂರ್ಣ ಯೋಜನೆ ಜೊತೆಗೆ ಸೂಕ್ಷ್ಮ ಯೋಜನೆ ತಯಾರಿಸಿ ಮಾನವ ಸರಪಳಿ ಹಾದುಹೋಗುವ ಗ್ರಾಮ ಸೇರಿದಂತೆ,೧೦ ಕಿಲೋ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ನಡೆಸಿ ಮತ್ತು ಗ್ರಾಮದ ಶಾಲೆಗಳಲ್ಲಿ ಸಭೆಯನ್ನು ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ಅಧಿಕಾರಿ, ಸಿಬ್ಬಂದಿಗಳು ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು, ಪಿಡಿಓ, ನರೇಗಾ, ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಅವಶ್ಯಕ ಪೂರ್ವಸಿದ್ದತಾ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ಹಾದು ಹೋಗುವಾಗ ವಾಹನ ದಟ್ಟಣೆ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ವಹಿಸಿ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡು ಮಾನವ ಸರಪಳಿಯ ಪ್ರಾರಂಭ ಮತ್ತು ಅಂತ್ಯ ಸ್ಥಳವನ್ನು ಗುರುತಿಸಬೇಕು ಎಂದು ಸೂಚಿಸಿದರು.
ಪ್ರತಿ ಕಿಲೋಮೀಟರ್ ಅನ್ನು ಬಣ್ಣ ಹಚ್ಚಿ ಗುರುತು ಮಾಡಿಕೊಂಡು ಪ್ರತಿ ೧ಕಿ.ಮೀ ಗೆ ಒಬ್ಬರಂತೆ ನೂಡಲ್ ಅಧಿಕಾರಿಯನ್ನು ಪೂರ್ವಯೋಜನೆ ತಯಾರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ಗ್ರಾಮ ಮತ್ತು ತಾಲೂಕಗಳಲ್ಲಿರುವ ವಿವಿಧ ಸಂಘಟನೆಗಳ ಮತ್ತು ಸ್ವ ಸಹಾಯ ಗುಂಪುಗಳ ಜೊತೆ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು, ಪದಾಧಿಕಾರಿಗಳು, ಮತ್ತು ಸಾರ್ವಜನಿಕರನ್ನು ಸೇರಿಸಬೇಕು ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ನೀಡಿ, ಮಕ್ಕಳನ್ನು ಕರೆ ತರುವ ಮತ್ತು ಕಳಿಸುವ ಕೆಲಸ ಸರಿಯಾಗಿ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಪಿ ಎಸ್ ಐ, ಡಿ ವಾಯ್ ಎಸ್ ಪಿ ಮತ್ತು ಸಂಚಾರಿ ಪೊಲೀಸ್ ಗಳು ಕಾರ್ಯನಿವಹಿಸಿ ಮಾನವ ಸರಪಳಿಗೆ ಸಂಪೂರ್ಣ ಬಂದೂಬಸ್ತ್ ಒದಗಿಸಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ , ಮಾನವ ಸರಪಳಿಯ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ , ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ , ಕೆಜಿ ಎಫ್ ನ ಪೊಲೀಸ್ ವರಿಷ್ಟಾಧಿಕಾರಿ ಶಾಂತಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ , ವಿವಿಧ ತಾಲೂಕಿನ ತಹಶಿಲ್ದಾರರು ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು ಹಾಜರಿದ್ದರು.