ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಸಿದ್ದತೆ ಪರಿಶೀಲನೆ
ಕೋಲಾರ,ಸೆ,೧೪- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ ರಂದು ಮಾನವ ಸರಪಳಿ ನಿರ್ಮಿಸಿ ಅರ್ಥಪೂರ್ಣವಾಗಿ ಆಚರಿಸೋಣ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಸಮಾಜಕ್ಕೆ ಸಾರಿ ಹೇಳುವ ಈ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಉಪವಿಭಾಗಾಧಿಕಾರಿ ಮೈತ್ರಿ ಕರೆ ನೀಡಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೫೫ ಕಿಮೀ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ದಿನದಂದು ಕೋಲಾರ ಜಿಲ್ಲೆಯ ೧ನೇ ಪಾಯಿಂಟ್ ನಲ್ಲಿ ಚಿಕ್ಕೊಂಡಹಳ್ಳಿ ಇಂದ ೧ಕಿಲೋ ಮೀಟರ್ ದೂರದ ವರೆಗಿನ ಮಾನವ ಸರಪಳಿ ನಿರ್ಮಿಸಲು ಸುಮಾರು ೧ಸಾವಿರ ವಿದ್ಯಾರ್ಥಿಗಳು ಸಂಘ ಸಂಸ್ಥೆಯವರು ಸಹಯೋಗದಿಂದ ಯಶಸ್ವಿ ಗೊಳಿಸುವ ಬಗ್ಗೆ ಚರ್ಚಿಸಿ ಹಲವು ಸಲಹೆ ಸೂಚನೆ ನೀಡಿದರು.ಸೆಪ್ಟೆಂಬರ್ ೧೫ ಬೆಳಗ್ಗೆ ೯ ಗಂಟೆಗೆ ಜಿಲ್ಲೆಯ ಚಿಕ್ಕೊಂಡಹಳ್ಳಿ ಗ್ರಾಮದಿಂದ ವೆಂಕಟಾಪುರ ಗ್ರಾಮದವರೆಗೆ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ಜರಗುತ್ತಿದ್ದು ಕೋಲಾರ ತಾಲೂಕಿನಲ್ಲಿ ಮಾನವ ಸರಪಳಿ ಹಾದು ಹೋಗುತ್ತಿದ್ದು ಪ್ರತಿ ಕಿಲೋ ಮೀಟರ್‌ಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಿ, ಮುಖ್ಯ ವೃತ್ತಗಳಲ್ಲಿ ತೋರಣ ,ಬ್ಯಾನರ್ ಹಾಕಿಸಿ ಮಾನವ ಸರಪಳಿ ನಿರ್ಮಿಸಿ ೧೦೦ ಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಸೇರಿಸಿ ಸಂವಿಧಾನದ ಪೀಠಿಕೆ ಓದಿಸಿ, ರಾಷ್ಟ್ರಗೀತೆ ಹಾಡಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.ಮಾನವ ಸರಪಳಿ ಹಾದುಹೋಗುವ ಗ್ರಾಮ ಸೇರಿದಂತೆ,೧೦ ಕಿಲೋ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ನಡೆಸಿ ಮತ್ತು ಗ್ರಾಮದ ಶಾಲೆಗಳಲ್ಲಿ ಸಭೆಯನ್ನು ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ಅಧಿಕಾರಿ, ಸಿಬ್ಬಂದಿ ಭಾಗವಹಿಸುವಂತೆ ಡಿಸಿಯವರು ಸೂಚಿಸಿದ್ದು, ನಾವು ಈದಿನವನ್ನು ಯಶಸ್ವಿಗೊಳಿಸೋಣ ಎಂದರು.
ಭಾನುವರ ರಜೆ ಎಂದು ಮನೆಯಲ್ಲಿ ಕೂರದಿರಿ ಎಂದ ಅವರು, ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ, ಸಮಾಜಕ್ಕೆ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಿಹೇಳುವ ಈ ಮಾನವ ಸರಪಳಿ ಹೊಸ ದಾಖಲೆಯಾಗಿದೆ ಎಂದರು.
ಕ್ಯಾಲನೂರು ಪಾಯಿಂಟ್‌ನಲ್ಲಿ ವಿವಿಧ ಸಂಘಟನೆಗಳ ಮತ್ತು ಸ್ವ ಸಹಾಯ ಗುಂಪುಗಳ ಜೊತೆ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು, ಪದಾಧಿಕಾರಿಗಳು, ಮತ್ತು ಸಾರ್ವಜನಿಕರನ್ನು ಸೇರಿಸಬೇಕು ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ನೀಡಿ, ಮಕ್ಕಳನ್ನು ಕರೆ ತರುವ ಮತ್ತು ಕಳಿಸುವ ಕೆಲಸ ಸರಿಯಾಗಿ ಆಗಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಓ. ಮಲ್ಲಿಕಾರ್ಜುನ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಾದ ಸುಬ್ರಹ್ಮಣ್ಯ ಚಾರಿ, ರಾಜೇಶ್,ರಾಮಲಿಂಗಪ್ಪ, ಜ್ಯೋತಿ,ಸಂಗೀತ, ಜ್ಯೋತಿ ಲಕ್ಷ್ಮೀ, ಅಮರ್,ದೇವರಾಜ್ ಹಾಗೂ ಮುನಿರಾಜ,ಗ್ರಾಮಪಂಚಾಯ್ತಿ ಸದಸ್ಯರಾದ ಲೋಕೇಶ್, ಪ್ರಸಾದ್ ಮತ್ತಿತರರಿದ್ದರು.