ಮೇಡಿತಂಬಿಹಳ್ಳಿ ಎಂಪಿಸಿಎಸ್‌ಗೆ ೨ನೇ ವರ್ಷ ೧.೬೦ ಲಕ್ಷ ಲಾಭ
ಕೋಲಾರ,ಸೆ,೧೪-ಮಹಿಳೆಯರೇ ನಡೆಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಎಲ್ಲಾ ನಿರ್ದೇಶಕರು ಸಹಕಾರ ನೀಡಬೇಕುಲ ಎಂದು ತಾಲ್ಲೂಕಿನ ಮೇಡಿ ತಂಬಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಸುನಿತಾ ಮನವಿ ಮಾಡಿದರು.
ಸಂಘದ ಸಭಾಂಗಣದಲ್ಲಿ ೨೦೨೩-೨೪ ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, . ಸಂಘ ಪ್ರಾರಂಭಿಸಿದ ೨ನೇ ವರ್ಷದಲ್ಲಿ ವೆಚ್ಚಗಳನ್ನು ಕಳೆದು ರೂ.೧,೧೬೦ ಲಕ್ಷರೂ ಲಾಭದಲ್ಲಿದೆ ಹಾಗೂ ಇದು ಮಹಿಳಾ ಸಂಘಗಳಲ್ಲಿ ತಾಲೂಕಿನಲ್ಲಿ ಒಂದನೇ ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರಿಗೆ ಅನ್ಯಾಯವಾಗ ದಂತೆ ಸಂಘದಲ್ಲಿ ಪಾರದರ್ಶಕ ವ್ಯವಸ್ಥೆಯೊಂದಿಗೆ ಆಡಳಿತ ನಡೆಸುತ್ತಿದ್ದು, ಹೆಚ್ಚು ಹಾಲು ಸಂಗ್ರಹಿಸುವ ಮೂಲಕ ಲಾಭದತ್ತ ಕೊಂಡೊಯ್ಯುವ ತಮ್ಮ ಪ್ರಯತ್ನಕ್ಕೆ ಎಲ್ಲಾ ನಿರ್ದೇಶಕರು ಸಹಕಾರ ನೀಡುತ್ತಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
ಹೈನೋದ್ಯಮ ಕೋಲಾರ ಜಿಲ್ಲೆಯ ಜನತೆಯ ಜೀವಾಳವಾಗಿದೆ, ಅದರಲ್ಲೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾರಣವಾಗಿದ್ದು, ಹಸು ಸಾಕಾಣೆಯಿಂದ ಹಾಲು ಕರೆಯುವವರೆಗೂ ಮಹಿಳೆಯರೇ ದುಡಿಯುತ್ತಿದ್ದಾರೆ, ಇಂದು ಅನೇಕರ ಕುಟುಂಬ ನಿರ್ವಹಣೆಗೂ ಈ ಉದ್ಯಮ ಆಧಾರವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗಪ್ಪ ಉಪಸ್ಥಿತರಿದ್ದು, ಗುಣಮಟ್ಟದ ಹಾಲು ಶೇಖರಣೆಗೆ ಒತ್ತು ನೀಡಿ, ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಸಂಘ ಗುಣಮಟ್ಟ ಕಾಪಾಡಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಕೋಲಾರ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರು ಮತ್ತು ಉತ್ಪಾದಕರ ಮಕ್ಕಳಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ, ಸಂಘದ ನೂತನ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡಲಾಗುತ್ತಿದೆ, ಪಶು ಆಹಾರ, ರಾಸುಗಳಿಗೆ ಚಿಕಿತ್ಸೆ, ವಿಮಾ ಸೌಲಭ್ಯ ನೀಡುತ್ತಿದ್ದು, ಉತ್ಪಾದಕರು ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯ ಎಂ.ಗೋಪಾಲಪ್ಪ, ಸಂಘದ ಉಪಾಧ್ಯಕ್ಷೆ ಹೇಮ, ನಿರ್ದೇಶಕರುಗಳಾದ ಗೀತಾ, ಪಾರ್ವತಮ್ಮ, ಮಂಜುಳಾ, ಸವಿತಮ್ಮ, ಸಾವಿತ್ರಮ್ಮ , ಜಿ.ಮಾಲ ,ರತ್ನಮ್ಮ, ನೀಲಮ್ಮ ,ರತ್ನಮ್ಮ ಮತ್ತು ಕಾರ್ಯನಿರ್ವಹಣಾಧಿಕಾರಿ ಇ.ಸವಿತಾ, ಹಾಲು ಪರೀಕ್ಷಕಿ ವಿಮಲಮ್ಮ ಹಾಜರಿದ್ದರು.