ಪ್ರೌಢಶಾಲಾ ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ
ಕೋಲಾರ,ಸೆ,೧೪:ಬದುಕಿನ ಪ್ರತಿಹಂತದಲ್ಲೂ ಹಾಸುಹೊಕ್ಕಾಗಿರುವ ವಿಜ್ಞಾನ ದೇಶದ ರಕ್ಷಣೆ, ಅಭಿವೃದ್ದಿಯ ಜತೆಗೆ ಭಾರತ ವಿಶ್ವಮಾನ್ಯವಾಗಿಸುವಲ್ಲಿ ಅತಿ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಭಾರ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಶಂಕರೇಗೌಡ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಪ್ರೌಢಶಾಲಾ ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಜ್ಞಾನವಿಲ್ಲದೇ ಇಂದು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಅದು ನಮ್ಮ ಜೀವನದಲ್ಲಿ ಮಿಳಿತವಾಗಿದೆ ಎಂದ ಅವರು, ಇಸ್ರೋ ಸಂಸ್ಥೆ ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುವ ಶಕ್ತಿ ನೀಡಿದ್ದು ವಿಜ್ಞಾನವೇ ಆಗಿದೆ, ಇಂದು ಚಂದ್ರನಲ್ಲಿಗೆ ಉಪಗ್ರಹ ಕಳುಹಿಸಿದ ವಿಶ್ವದ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ದೇಶದ ಘನತೆ ವಿಶ್ವಮಾನ್ಯವಾಗಿದೆ ಎಂದರು.
ಆಧುನಿಕತೆ ಬೆಳೆದೆಂತಲ್ಲಾ ವಿಜ್ಞಾನವನ್ನು ಆಶ್ರಯಿಸುವುದು ಹೆಚ್ಚಾಗಿದೆ ಎಂದ ಅವರು, ಮಕ್ಕಳು ವಿಜ್ಞಾನಿಗಳಾಗಲು ಚಿಂತನೆ ಮಾಡಿ, ಕೇವಲ ಡಾಕ್ಟರ್, ಇಂಜಿನಿಯರ್ ಆಗುವ ಆಶಯ ಬೇಡ, ಮೂಲ ಪದವಿ ಓದಿ ವಿಜ್ಞಾನ ಕ್ಷೇತ್ರದಲ್ಲೂ ಕೆಲಸ ಮಾಡಿ ದೇಶದ ಪ್ರಗತಿಗೆ ಕೊಡುಗೆ ನೀಡಿ ಎಂದು ಕರೆ ನೀಡಿದರು.
ವಸ್ತುಪ್ರದರ್ಶನದಲ್ಲಿ ೫೦ಕ್ಕೂ ಹೆಚ್ಚು ಶಾಲೆಗಳ ನೂರಾರು ಮಕ್ಕಳು ತಾವು ತಯಾರಿಸಿದ್ದ ವಿಜ್ಞಾನಪರಿಕರಗಳನ್ನು ಪ್ರದರ್ಶಿಸಿದರು.
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವವಿಜ್ಞಾನ, ಜೀವರಸಾಯನಶಾಸ್ತ್ರ, ಇಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ, ಅಂತರಿಕ್ಷ ವಿಜ್ಞಾನದಲ್ಲಿ ಮಕ್ಕಳು ಪರಿಕರಗಳನ್ನು ತಯಾರಿಸಿ ಪ್ರದರ್ಶಿಸಿದರು. ಪ್ರತಿ ವಿಭಾಗದಲ್ಲೂ ತಲಾ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಕಾಯಕ್ರಮದಲ್ಲಿ ಡಿಡಿಪಿಐ ಕಚೇರಿ ತಾಂತ್ರಿಕ ಸಹಾಯಕ ಶರಣಪ್ಪಜಮಾದಾರ್, ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ತೀರ್ಪುಗಾರರಾಗಿ ಅಮರೇಶಬಾಬು,ಬಿ.ಕೆ.ಹೇಮಾ, ಭಾಗ್ಯಲಕ್ಷ್ಮಿ, ಜಯಂತಿ,ರಾಜಶೇಖರ್, ವಿಜ್ಞಾನ ಶಿಕ್ಷಕರಾದ ಎಂ.ಬಿ.ಶ್ವೇತಾ, ರಾಘವೇಂದ್ರ ಮತ್ತಿತರರು ಹಾಜರಿದ್ದರು.