ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ:ಪ್ರಕರಣ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಸೆ 14 :– ಕೊಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಖಂಡಿಸಿ ಮಹಿಳೋದಯ ಮಹಿಳಾ ಒಕ್ಕೂಟದಿಂದ ಮಹಿಳೆಯರ ಹಕ್ಕು ಒತ್ತಾಯ ಪ್ರತಿಭಟನೆ ನಡೆಸಿದರು.
ಹನೂರು ಪಟ್ಟಣದಲ್ಲಿ ಮಹಿಳಾ ಉದಯ ಮಹಿಳಾ ಒಕ್ಕೂಟ (ಒಡಿಪಿ ಸಂಸ್ಥೆ) ಸಂಘಟನೆಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆವೆಸಗಿದ ಆರೋಪಿಗಳನ್ನು ಕೂಡಲೆ ಬಂಧಿಸಿ ಅವರಿಗೆ ಮರಣ ದಂಡನೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗುರುಪ್ರಸಾದ್ ಅವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.
ನಮ್ಮ ದೇಶದ ಉದ್ದಗಲಕ್ಕೂ ಪ್ರತಿ ದಿನ, ಪ್ರತಿ ಕ್ಷಣ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಅಂಕಿ ಅಂಶಗಳು ಹೆಚ್ಚುತ್ತಲೆ ಇದೆ. ಇದೊಂದು ಅಘಾತಕಾರಿ ವಿಷಯ. ಕೇಂದ್ರ ಮತ್ತು ರಾಜ್ಯ ಸಕಾ9ರಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗದ ಮೂಲಕ ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾರ್ಯ ಕ್ರಮಗಳ ಮೂಲಕ ಯೋಜನೆಗಳನ್ನು ರೂಪಿಸಿದ್ದರೂ ಕಾರ್ಯ ನಿರ್ವಹಣೆಯಲ್ಲಿ ವಿಫಲತೆಯನ್ನು ನೋಡುತ್ತಿದ್ದೇವೆ.
ಕೆಲ ದಿನಗಳ ಹಿಂದೆ, ಪಶ್ಚಿಮ ಬಂಗಾಲ ರಾಜ್ಯದ ಕೊಲ್ಕತ್ತಾದಲ್ಲಿನ ಅರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ತಾರೀಕಿನಂದು ರಾತ್ರಿ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ.
ಅದರಲ್ಲೂ 24 ಘಿ 7 ಜನ ಸೇವೆ ಮಾಡುತ್ತಿರುವ ವೇಳೆಯಲ್ಲಿ ವೈದ್ಯರ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವುದು ಖಂಡನೀಯ. ಅದೇ ರೀತಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ಬಸ್ ನಿಲ್ದಾಣದಲ್ಲಿ ಯುವತಿಮೇಲೆ ಸಾಮೂಹಿಕ ಅತ್ಯಾಚಾರ. ನಮ್ಮದೇ ಕರ್ನಾಟಕ ರಾಜ್ಯದ ಬೆಂಗಳೂರಿನ ಹೆಚ್ ಎಸ್.ಆರ್ ಲೇ ಔಟ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ. ಇಂತದೇ ಹತ್ತು ಹಲವಾರು ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಹಿಳೋದಯ ಮಹಿಳಾ ಒಕ್ಕೂಟದ ಬೇಡಿಕೆಗಳು /ಹಕ್ಕು ಒತ್ತಾಯ :
ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆವೆಸಗಿದ ಆರೋಪಿಗಳನ್ನು ಕೂಡಲೇ ಬಂದಿಸಿ ಅವರಿಗೆ ಮರಣ ದಂಡನೆ ವಿಧಿಸುವುದು. ಮಹಿಳೆಯರ ಮೇಲಿನ ಹೀನಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತವರಣ ನಿರ್ಮಿಸುವುದು.
ಎಲ್ಲಾ ಹೆಣ್ಣುಮಕ್ಕಳ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ನೀಡುವುದು. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ / ಕೇಂದ್ರ ಸರಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳುವುದು. ಕೋರ್ಟ್‍ಗಳಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಮಾಡುವುದು ಮತ್ತು ತಪ್ಪಿತಸ್ತರಿಗೆ ಶಿಕ್ಷೆ ನೀಡುವುದು.
ಮಹಿಳೆಯರು ನಿರ್ಭೀತಿಯಿಂದ ಜೀವಿಸಲು ತಳಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಕಾನೂನು ರೀತಿಯಲ್ಲಿ ಸೂಕ್ತ ರಕ್ಷಣೆ ನೀಡುವುದು. ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಬೇಕು. ಈಗಿರುವ ಶಿಕ್ಷೆಯ ವಿಧಾನವನ್ನು ಬದಲಿಸಬೇಕು ಮತ್ತು ಅತೀ ಶೀಘ್ರದಲ್ಲಿ ತೀರ್ಪು ನೀಡಿ ಅತ್ಯಾಚಾರಿಗಳನ್ನು ಮಟ್ಟ ಹಾಕಬೇಕು.
ಇದು ನಾಗರೀಕ ಸಮಾಜದಲ್ಲಿರುವ ಇತರ ವಿಕೃತ ಪುರುಷರಿಗೆ ಪಾಠವಾಗಬೇಕು. ಸ್ಥಳೀಯ ಶಾಸಕರು ಮತ್ತು ಸಂಸದರು ತಮ್ಮ ಸಭೆಗಳಲ್ಲಿ ಮಹಿಳಾ ದೌಜನ್ಯಕ್ಕೆ ಧ್ವನಿ ಎತ್ತುವುದು ಮತ್ತು ರಕ್ಷಣೆಗೆ ಬೇಕಾದಂತ ಅಗತ್ಯ ಕ್ರಮಗಳ ಬಗ್ಗೆ ಗಮನಹರಿಸುವುದು. ಮಹಿಳೆಯರಿಗೆ ಎಲ್ಲಾ ರೀತಿಯ ಸೂಕ್ತ ರಕ್ಷಣೆ ನೀಡಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳೋದಯ ಮಹಿಳಾ ಒಕ್ಕೂಟ ಸಾಗರ್, ಪ್ರವೀಣ್ ಕುಮಾರ್, ರಾಮಕೃಷ್ಣ, ಮಹೇಶ್, ಮೋಕ್ಷ ಮೇರಿ, ಲಿಲ್ಲಿ ಸೆಲ್ವಿ ಕುಮಾರಿ, ಪಾಕ್ಯಮೇರಿ, ಅಂಥೋನಿಯಮ್ಮಳ್, ಪಾಸ್ಕಮೇರಿ, ವಲಯ ಸಂಯೋಜಕರು ಲಿಲ್ಲಿ ಮೇರಿ ಇನ್ನಿತರರು ಮಹಿಳೆಯರು ಹಾಜರಿದ್ದರು.