ನಾಳೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ
ಅಥಣಿ : ಸೆ.೧೪:ಪ್ರಸಕ್ತ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. ೯೦ ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದ ಗಂಗಾಮತ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬರುವ ರವಿವಾರ ದಿ.೧೫ ರಂದು ಮುಂಜಾನೆ ೧೦ ಗಂಟೆಗೆ ಸ್ಥಳೀಯ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ವಿಭಾಗದ ಗಂಗಾಮತಸ್ಥ ಕೋಳಿ ಸಮಾಜದ ಅಧ್ಯಕ್ಷ ಎಸ್ ಕೆ ಹೊಳೆಪ್ಪನವರ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚಿಕ್ಕೋಡಿ ವಿಭಾಗದ ಗಂಗಾ ಮತಸ್ಥ ಕೋಳಿ ಸಮಾಜ ಸಂಘ, ವ್ಯಾಸ ಮಹರ್ಷಿ, ನಿಜಶರಣ ಅಂಬಿಗರ ಚೌಡಯ್ಯ ಯೋಗ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಅಥಣಿ ಇವರ ಸಹಯೋಗದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಆಗಮಿಸಲಿದ್ದು, ಅಬಕಾರಿ ಇಲಾಖೆಯ ಅಧೀಕ್ಷಕ ವಿನೋದ್ ಡಂಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದ ಅಧ್ಯಕ್ಷ ದಿಲೀಪಕುಮಾರ ಕುರಂದವಾಡೆ, ಬೆಳಗಾವಿ ಜಿಲ್ಲಾ ಗಂಗಾಮತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ, ಶಿಕ್ಷಣ ತಜ್ಞ ಸುರೇಶ ಚಿಕ್ಕಟ್ಟಿ, ಸನ್ಮಾನಿತರಾಗಿ ಸಮಾಜ ಸೇವಕ ವಿ ಎಸ್ ಆಲಗೂರ, ಚಲನಚಿತ್ರ ಬಾಲನಟ ಮಾಸ್ಟರ್ ಮಿಥುನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ ಚಿಕ್ಕಟ್ಟಿ, ಡಾ. ಆರ್ ಎಸ್ ದೊಡ್ಡನಿoಗಪ್ಪಗೋಳ. ಕಿಶೋರ್ ಸಿರಗೆ, ಸದಾಶಿವ ಚೆಕಟ್ಟಿ, ಸುರೇಶ್ ಕೋಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.