ಸಂಚಾರಕ್ಕೆ ಅಡಚಣೆಯಾಗಿದ್ದರು ಲೋಕೋಪಯೋಗಿ ಅಧಿಕಾರಿಗಳು ಮೌನ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.14: ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಕೊರಕಲು ಬಿದ್ದು ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದರೂ ತಾಲೂಕು ಲೋಕೋಪಯೋಗಿ ಇಲಾಖೆ ಮಾತ್ರ ಗಾಢ ನಿದ್ರೆಯಲ್ಲಿದೆ.
ತಾಲೂಕು ವ್ಯಾಪ್ತಿಯಲ್ಲಿ ಹಾದುಹೋಗಿರುವ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹಲವಾರು ಕಡೆ ಗುಂಡಿಬಿದ್ದಿದ್ದು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ರಸ್ತೆ ಗುಂಡಿಗಳ ಜೊತೆಗೆ ಅಲ್ಲಲ್ಲಿ ರೈತರು ತಮ್ಮ ಕೃಷಿ ಪಂಪ್ ಸೆಟ್ಟುಗಳಿಗೆ ಪೈಪುಗಳನ್ನು ಅಳವಡಿಸಿಕೊಳ್ಳಲು ರಸ್ತೆಯನ್ನು ಅಗೆದಿದ್ದಾರೆ ಪೈಪುಗಳನ್ನು ಹಾಕಿಕೊಳ್ಳಲು ಅಗೆದ ರಸ್ತೆಯನ್ನು ರೈತರೂ ಮುಚ್ಚುತ್ತಿಲ್ಲ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೂ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತಗಳಿಗೆ ಈಡಾಗುತ್ತಿವೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಪರಿಣಾಮ ಸದರಿ ರಸ್ತೆಯ ಮೇಲೆ ಆಗಿರುವಂತಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿದರೂ ಕೂಡ ಸದರಿ ರಸ್ತೆಯ ಅಭಿವೃದ್ದಿಗೆ ಮುಂದಾಗಲಿಲ್ಲ. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಈ ರಸ್ತೆಯ ಅಭಿವೃದ್ದಿಗೆ ಮುಂದಾಗಿಲ್ಲ. ಕ್ಷೇತ್ರದ ಶಾಸಕರಾಗಿರುವ ಹೆಚ್.ಟಿ.ಮಂಜು ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಅಭಿವೃದ್ದಿ ಪಡಿಸುವಂತೆ ಜಿಲ್ಲೆಯ ಸಂಸದರೂ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಿರಂಗ ಮನವಿ ಪತ್ರ ಸಲ್ಲಿಸಿದ್ದು ಬಿಟ್ಟರೆ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಸ್ಥಿತಿಗತಿಗಳಲ್ಲಿ ಕಿಂಚಿತ್ತೂ ಬದಲಾವಣೆಯಾಗಿಲ್ಲ.
ಕೆ.ಆರ್.ಪೇಟೆ ಪಟ್ಟಣದ ಮೂಲಕ ಹಾದುಹೋಗುವ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಅಭಿವೃದ್ದಿಗೆ ನೂರಾರು ಕೋಟಿ ರೂ ಅನುದಾನ ಬೇಕು. ಸರ್ಕಾರದಲ್ಲಿ ಹಣವಿಲ್ಲದೆ ರಸ್ತೆ ಅಭಿವೃದ್ದಿಯಾಗಿಲ್ಲ ಅಂದುಕೊಳ್ಳೋಣ. ಆದರೆ ಕೆ.ಆರ್.ಪೇಟೆ ಪಟ್ಟಣದ ಒಳಗೆ ಅಂಬಾರಿ ಹೋಟೆಲ್ ಬಳಿಯಿಂದ ಹೆಚ್.ಎಲ್.ಬಿ.ಸಿ ವೃತ್ತದ ವರೆಗೆ ಮಳೆ ನೀರಿನಿಂದಾಗಿ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲೂ ಅಲ್ಲಲ್ಲಿ ನೀರು ಹರಿದು ಕೊರಕಲು ಉಂಟಾಗಿದೆ. ಮುಖ್ಯ ರಸ್ತೆಯ ಎರಡೂ ಬದಿಗಳಲ್ಲೂ ರಸ್ತೆ ಕೊರಕಲು ಬಿದ್ದಿರುವುದರಿಂದ ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡಲು ಒಂದಷ್ಟು ಪಕ್ಕಕ್ಕೆ ಸರಿದರೆ ಸಾಕು ವಾಹನಗಳು ರಸ್ತೆ ಕೊರಕಲಿಗೆ ಬಿದ್ದು ಅನಾಹುತಗಳಾಗುತ್ತಿವೆ. ಪಟ್ಟಣದ ಒಳಗಿನ ರಸ್ತೆ ಕೊರಕಲಿನಿಂದಾಗಿ ಹಲವಾರು ಬೈಕ್ ಸವಾರರು ತೀವ್ರ ಅಪಘಾತಗಳಿಗೆ ಒಳಗಾಗಿದ್ದಾರೆ. ಒಂದೆರಡು ಜೀವ ಹಾನಿಗಳೂ ಆಗಿವೆ. ರಸ್ತೆ ಕೊರಕಲು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲು ಕೋಟಿ ಹಣ ಬೇಕಾಗಿಲ್ಲ. ಕೆಲವೇ ಸಾವಿರ ರೂಗಳು ಸಾಕು. ತಾಲೂಕು ಲೋಕೋಪಯೋಗಿ ಇಲಾಖೆ ಕನಿಷ್ಠ ರಸ್ತೆ ಕೊರಕಲು ಮುಚ್ಚಿಸುವುದಕ್ಕೂ ಹಣವಿಲ್ಲದಷ್ಟು ಪಾಪರ್ ಆಗಿದೆಯಾ? ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ ಈಗಲಾದರೂ ಕ್ಷೇತ್ರದ ಶಾಸಕರು ಎಚ್ಚೆತ್ತು ರಸ್ತೆ ಬದಿಯ ಕೊರಕಲು ಮುಚ್ಚಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎನ್ನುತ್ತಾರೆ ಸಾರ್ವಜನಿಕರು.