ಮೀಸಲಾತಿ ರದ್ದುಪಡಿಸುವ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.14– ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದು ಪಡಿಸುವಂತೆ ಒತ್ತಾಯಿಸಿ ಬಿಜೆಪಿ ಎಸ್‍ಸಿ, ಎಸ್‍ಸಿ, ಒಬಿಸಿ ಮೋರ್ಚಾ ಹಾಗೂ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎನ್. ಮಹೇಶ್ ಮಾತನಾಡಿ, ಮೀಸಲಾತಿ ರದ್ದುಪಡಿಸಲು ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬರಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುವ ಇತರೇ ಪರಿಹಾರಗಳನ್ನು ಕಂಡು ಕೊಳ್ಳಲಾಗುವುದು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಂವಾದದಲ್ಲಿ ಹೇಳಿದ್ದಾರೆ. ಇದÀು ಕಾಂಗ್ರೆಸ್ ಮನಸ್ಥಿತಿಯಾಗಿದ್ದು, ಡಾ. ಅಂಬೇಡ್ಕರ್ ಹಾಗೂ ಸಂವಿಧಾನದ ವಿರುದ್ದವಾಗಿ ಕಾಂಗ್ರೆಸ್ ಹಿಂದಿನಿಂದಲು ಇದೆ ಎಂಬುವುದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ. ಹೀಗಾಗಿ ಕಾಂಗ್ರೆಸ್ ಹಠವೋ ಮೀಸಲಾತಿ ಬಚಾವೋ ಅಭಿಯಾನವನ್ನು ಬಿಜೆಪಿ ನಡೆಸಲಿದೆ ಮೀಸಲಾತಿ ರಕ್ಷಣೆಗಾಗಿ ಬಿಜೆಪಿ ನಿರಂತರ ಹೋರಾಟ ಮಾಡಲಾಗುತ್ತದೆ ಎಂದರು.
ಅಮೇರಿಕಾ ಪ್ರವಾಸಲ್ಲಿರುವ ರಾಹುಲ್‍ಗಾಂಧಿ ಅವರು ಜಾಜ್ರ್ಟೌನ್ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಸಂವಾದದಲ್ಲಿ ಭಾರತದಲ್ಲಿರುವ ಮೀಸಲಾತಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷವೇ ಮೀಸಲಾತಿಯನ್ನು ತೆಗೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ. ಇಂಥ ನಾಯಕರು ಹಾಗು ಪಕ್ಷ ನಾವು ಮೀಸಲಾತಿ ಪರ ಹಾಗೂ ಸಂವಿಧಾನ ರಕ್ಷಕರು ಎಂದು ಹೇಳಿಕೊಂಡು ಆ ವರ್ಗಗಳ ಮತಗಳನ್ನು ಪಡೆದು ಅನ್ಯಾಯ ಮಾಡುತ್ತಾಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಪೂರ್ವದಿಂದಲು ಸಹ ಕಾಂಗ್ರೆಸ್ ಪಕ್ಷ ಮೀಸಲಾತಿ ವಿರುದ್ದದ ನಿಲುವು ಹೊಂದಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮ ಸಮುದಾಯದ ಬಂಧುಗಳು ಹಾಗು ಓಬಿಸಿ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮೋಸ ಹೋಗುತ್ತಿದೆ. ಈ ಪಕ್ಷದಲ್ಲಿದ್ದು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ನಮ್ಮ ಎಚ್.ಸಿ. ಮಹದೇವಪ್ಪ ಅವರು ಏನು ಹೇಳುತ್ತಾರೆ. ಅವರದೇ ಪಕ್ಷದ ನಾಯಕರು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‍ಗೆ ಮೀಸಲಾತಿ ಪರ ಇರುವ ಬಣ್ಣ ಬಯಲಾಗಿದೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಿಸಬೇಕು. ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದು ಪಡಿಸುವಂತೆ ಒತ್ತಾಯಿಸಿದರು.
ಕೇವಲ ಅಂಬೇಡ್ಕರ್ ಬರೆದ ಪುಸ್ತಕ ಹಿಡಿದುಕೊಂಡರೆ ಜ್ಞಾನಿಯಾಗುವುದಿಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ 60 ವರ್ಷಗಳ ಆಡಳಿತದಲ್ಲಿ ತೆಗೆದುಕೊಂಡು ಬಹಳಷ್ಟು ನಿರ್ಣಯಗಳು ಸಂವಿಧಾನದ ವಿರುದ್ದವಾಗಿದೆ. ಇಂಥ ಪಕ್ಷವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರು ಬೆಂಬಲಿಸಬೇಕಾ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಉಪಾಧ್ಯಕ್ಷರಾದ ವಿರಾಟ್ ಶಿವು, ಅರಕಲವಾಡಿ ನಾಗೇಂದ್ರ ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಎಸ್‍ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬುಲೆಟ್ ಚಂದ್ರ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಹಿರಿಯ ಮುಖಂಡ ಆರ್.ಪುಟ್ಟಮಲ್ಲಪ್ಪ, ನಗರಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಮಹೇಶ್, ಕೊಳ್ಳೇಗಾಲ ನಗರಸಭಾ ಮಾಜಿ ಸದಸ್ಯ ಮೂರ್ತಿ, ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ದೇಪೇಪುರ ಮಹದೇವಸ್ವಾಮಿ, ಚುಡಾ ಮಾಜಿ ಅಧ್ಯಕ್ಷ ಕುಲಗಾಣಶಾಂತಮೂರ್ತಿ, ಗುಂಡ್ಲುಪೇಟೆ ಹನುಮಂತಶೆಟ್ಟಿ, ಶ್ಯಾಡ್ರಹಳ್ಳಿ ರಾಜೇಂದ್ರ, ಭಾನುಪ್ರಕಾಶ್, ಮಂಡಲ ಅಧ್ಯಕ್ಷರಾದ ಅನಿಲ್, ವೃಷಬೇಂದ್ರಸ್ವಾಮಿ, ಮಾಂಬಳ್ಳಿ ರಾಮಣ್ಣ, ಹೊಂಗನೂರು ಮಹದೇವಸ್ವಾಮಿ, ಮಂಜುನಾಥ್ ಮೊದಲಾದವರು ಇದ್ದರು.