ಶಿಸ್ತು, ಸಂಯಮ ಇದ್ದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ: ಹಳ್ಳದಮನಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೪:ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಪ್ರಭಾರಿ ಉಪನಿರ್ದೇಶಕ ಎಲ್. ಆರ್. ಹಳ್ಳದಮನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಡಾ. ಬಿ. ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಗುಂಪು ಆಟಗಳ ಕ್ರೀಡಾಕೂಟ ಉದ್ಘಾಟಿನಾ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮವಿದ್ದರೆ ಮಾತ್ರ ಕ್ರೀಡೆÀಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದ ಅವರು ಕ್ರೀಡೆಗೆ ಪಠ್ಯದಷ್ಟೇ ಪ್ರಾಮುಖ್ಯತೆ ಸಿಗಬೇಕೆಂದು ಹೇಳಿದರು.
ಕ್ರೀಡಾಕೂಟವನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಸ್ಥಳೀಯ ತುಂಗಳ ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಕ್ರೀಡಾ ಸಂಯೋಜಕ ಗಣೇಶ ಗುನ್ನಾಪುರ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವನೆ ಇರಬೇಕು. ಆಗ ಮಾತ್ರ ಇಂತಹ ಕ್ರೀಡಾಕೂಟಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಯತೀರ್ಥ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗೆ ಮಹತ್ವ ನೀಡಬೇಕು. ಕ್ರೀಡೆ ಇಲ್ಲದ ಬಾಳು ಕೀಟ ತಿಂದ ಹಣ್ಣಿನಂತೆ ಎಂದರು.
ದೈಹಿಕ ಉಪನ್ಯಾಸಕ ಬಸವರಾಜ ನಾಗೋಡ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಯಲ್ಲಪ್ಪ ಜಂಪಲಿ, ವಿನಾಯಕ ಶಿಂಗೆ, ಸೋಮೇಶ ಅಳಗುಂಡಗಿ, ಸಂತೋಷ ಕಬಾಡೆ, ಮನೋಜ ದೊಡಮನಿ ಹಾಗೂ ನಿಂಗು ಸುರಪುರ ಪಾಲ್ಗೊಂಡಿದ್ದರು.
ದೈಹಿಕ ಉಪನ್ಯಾಸಕ ಅಜೀತ ಮಂದಾರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ಉಪನ್ಯಾಸಕರು ಹಾಗೂ ತರಬೇತುದಾರ ಹರೀಶ ಬೇವಿನಕಟ್ಟಿ, ಫಾರೂಕ್ ಮಕಾಂದಾರ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ರಾಹುಲ್ ಮರಳಿ ನಿರೂಪಿಸಿದರು. ಅಮೋಘ ವಡೆಯರ್ ವಂದಿಸಿದರು. ಕ್ರೀಡಾಕೂಟದಲ್ಲಿ ನಡೆದ ಫುಟಬಾಲ್,ನೆಟ್ ಬಾಲ್, ಚೆಸ್, ಲಾನ್ ಟೆನಿಸ್ ಕ್ರೀಡೆಗಳಲ್ಲಿ ಸುಮಾರು ೨೧ ಕಾಲೇಜುಗಳ ೬೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.