ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೌರ ಬೀದಿ ದೀಪ ಅಳವಡಿಕೆಯಿಂದ ವಿದ್ಯುತ್ ಹೊರೆ ಕಡಿಮೆ: ಪ್ರಿಯಾಂಕ್ ಖರ್ಗೆ
ಕಲಬುರಗಿ:ಸೆ.13: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ‘ಹೊಂಬೆಳಕು’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು’ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆಯಾಗದಿರುವುದರಿಂದ ಗ್ರಾಮ ಪಂಚಾಯತಿಗಳಿಗೆ ವಿದ್ಯುತ್ ವೆಚ್ಚದ ಹೊರೆ ಕಡಿಮೆಯಾಗಲಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಅಳವಡಿಸಲಾಗುತ್ತಿರುವ ಸೌರ ಬೀದಿ ದೀಪಗಳು ಎಲ್‍ಇಡಿ ತಂತ್ರಜ್ಞಾನವನ್ನು ಹೊಂದಿದ್ದು ದೀರ್ಘ ಕಾಲ ಬಾಳಿಕೆ ಬರಬಹುದೆಂದು ನಿರೀಕ್ಷಿಸಲಾಗಿದೆ, ಈ ವರ್ಷ ಸುಮಾರು 16,500 ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಗ್ರಾಮೀಣ ಜನರು ಪ್ರಖರ ಬೆಳಕನ್ನು ಪಡೆಯುವುದರೊಂದಿಗೆ ವಿದ್ಯುತ್ ವೆಚ್ಚದ ಮಿತವ್ಯಯದಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರುತಿಳಿಸಿದ್ದಾರೆ.