ರಾಜೀರಹಿತ ಒಗ್ಗಟ್ಟಿನ ಹೋರಾಟಕ್ಕೆ ಕರೆ
ಕಲಬುರಗಿ:ಸೆ.13: ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ರಾಜೀ ರಹಿತ ಹೋರಾಟವನ್ನು ಮಾಡಬೇಕು ಎಂದು ಎಸ್‍ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕಾ. ಕೆ. ಉಮಾ ಅವರು ಕರೆ ನೀಡಿದರು.
ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಗುಲಾಬಿ ಯೋಧರಾದ ಆಶಾ ಕಾರ್ಯಕರ್ತೆಯರ ಬೃಹತ್ ಮೆರವಣಿಗೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ, ವೀರಶೈವ ಕಲ್ಯಾಣ ಮಂಟಪದ ಎದುರಿನ ಪಾರ್ಕ್ ಮೈದಾನಕ್ಕೆ ಬಂದು ತಲುಪಿದ ನಂತರ ಬಹಿರಂಗ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜನತೆಯ ಆರೋಗ್ಯವನ್ನು ಕಾಪಾಡಲು ಕೊರೋನಾ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ್ದ ಈ ಕೊರೋನಾ ಯೋಧರನ್ನು ಇಡೀ ಜಗತ್ತೇ ಕೊಂಡಾಡಿದೆ. ಆದರೆ ಈವರಿಗೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳು-ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಈ ಎಲ್ಲ ಸರ್ಕಾರಗಳು ಬಂಡವಾಳಶಾಹಿಪರವಾದ ಸರ್ಕಾರಗಳಾಗಿವೆ. ಅಂದರೆ ಇಲ್ಲಿ ಎರಡು ಭಾರತಗಳಿವೆ. ಒಂದು 90ರಷ್ಟು ಇರುವ ದುಡಿಯುವ ಜನಗಳ, ಬಡಜನತೆಯ ಭಾರತ. ಮತ್ತೊಂದೆಡೆ 1ರಷ್ಟು ಇರುವ ಬಂಡವಾಳಶಾಹಿಗಳ ಭಾರತ. ದೇಶದ 77ರಷ್ಟು ಆಸ್ತಿ ದೇಶದ ಕೆಲವೇ ಕೆಲವು ಬಂಡವಾಳಶಾಹಿ ಕುಟುಂಬಗಳ ಒಡೆತನದಲ್ಲಿದೆ. ಆದರೆ ಕೇವಲ 22ರಷ್ಟು ಆಸ್ತಿ ದೇಶದ 90ರಷ್ಟು ಜನತೆಯ ಬಳಿ ಇದೆ. ಎಲ್ಲ ಪಕ್ಷಗಳ ಸರ್ಕಾರಗಳು ಇದೇ ಬಂಡವಾಳಶಾಹಿಗಳ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಬಂದು ಅವರ ಲಾಭವನ್ನು ಹೆಚ್ಚಿಸಲು ನೀತಿಗಳನ್ನು ತರುತ್ತಿವೆ ಮತ್ತು ದುಡಿಯುವ ಜನತೆಯ ಹಕ್ಕುಗಳನ್ನು ಕಸಿಯುತ್ತಿವೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಮತ್ತು ಕಾರ್ಮಿಕ ವರ್ಗ ಈ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.
ಆಳ್ವಿಕ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸದೆ, ಕನಿಷ್ಠ ವೇತನವನ್ನೂ ನೀಡದೇ, ಯೋಜನಾ ಕಾರ್ಯಕರ್ತೆಯರ ಹೆಸರಿನಲ್ಲಿ ಹಗಲಿರುಳೂ ಬಿಟ್ಟಿ ದುಡಿಸಿಕೊಳ್ಳಲಾಗುತ್ತಿದೆ. ಈಗಿನ ಸರ್ಕಾರ ಕೂಡ ತನ್ನ ಗ್ಯಾರಂಟಿಗಳಲ್ಲಿ ಆಶಾಗಳ ವೇತನ ಹೆಚ್ಚಿಸುತ್ತೇವೆಂಬುದು ಈಗಲೂ ಮರೀಚಿಕೆಯಾಗಿಯೇ ಇದೆ. ಆದ್ದರಿಂದ ಆಶಾ ಕಾರ್ಯಕರ್ತೆಯರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು, ಅಲ್ಲಿಯವರೆಗೆ ಅವರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಸೇವಾ ಭದ್ರತೆ ನೀಡಬೇಕು, ಸಾರ್ವಜನಿಕ ಆರೋಗ್ಯದ ಬಜೆಟ್‍ನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಗಳ ಕೇವಲ ಹೊಗಳಿಕೆಯಿಂದ ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಈ ಬೃಹತ್ ಮಹಿಳಾ ಸಮೂಹಕ್ಕೆ ಗೊತ್ತು. ಅದಕ್ಕೇ ಅವರು ಕಳೆದ 15 ವರ್ಷಗಳಿಂದ ಎಐಯುಟಿಯುಸಿ ನೇತೃತ್ವದ ಸಮರ್ಥ ನಾಯಕತ್ವದಲ್ಲಿ ಅವಿರತವಾಗಿ ಹೋರಾಟಗಳನ್ನು ಕಟ್ಟುತ್ತಾ ಸವಾಲುಗಳನ್ನು ಎದುರಿಸುತ್ತಾ, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತ ಸಾಗುತ್ತಿದ್ದಾರೆ. ಒಂದೆಡೆ ಕಾರ್ಮಿಕ ವರ್ಗದ ಶೋಷಣೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಉನ್ನತ ಸಂಸ್ಕøತಿ-ನೈತಿಕತೆ-ವೈಚಾರಿಕತೆಗಳ ಆಧಾರದ ಮೇಲೆ ರಾಜೀರಹಿತ ಹೋರಾಟದ ಅಸ್ತ್ರವಾದ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಎಲ್ಲ ಹಂತಗಳಲ್ಲಿನ ಆಶಾ ಕಾರ್ಯಕರ್ತೆಯರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಗಳಾದ ಮೆಡಿಕಲ್ ಸರ್ವಿಸ್ ಸೆಂಟರ್‍ನ ಅಖಿಲ ಭಾರತ ಉಪಾಧ್ಯಕ್ಷ ಡಾ.ಸುಧಾ ಕಾಮತ್ ಅವರು ಮಾತನಾಡಿ, ಜಾಗತೀಕರಣ, ಖಾಸಗೀಕರಣ ನೀತಿಗಳ ಅಳವಡಿಕೆಯಿಂದ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದ್ದರ ಪರಿಣಾಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ತೀವ್ರ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‍ನಲ್ಲಿ ಕೇವಲ 2.5ರಷ್ಟು ಹಾಗೂ ರಾಜ್ಯ ಸರ್ಕಾರ ಕೇವಲ 4ರಷ್ಟು ಅನುದಾನ ನೀಡುತ್ತಿವೆ. ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ತಾತ್ಕಾಲಿಕ ಭರ್ತಿ, ಈ ಕ್ಷೇತ್ರದಲ್ಲಿ ದುಡಿಯುವ ಎಲ್ಲರಿಗೂ ಆರ್ಥಿಕ-ಸಾಮಾಜಿಕ ಭದ್ರತೆ ಜೊತೆಗೆ ಬದುಕಿನ ಭದ್ರತೆ ಒದಗಿಸಬೇಕಾಗಿದೆ. ಆದರೆ ದಿನೇದಿನೇ ದೌರ್ಜನ್ಯ -ಅತ್ಯಾಚಾರಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಗಳನ್ನು ಆಗ್ರಹಿಸಿದರು.
ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕಾ. ಕೆ. ಸೋಮಶೇಖರ್ ಅವರು ಮಾತನಾಡಿ, ಬಂಡವಾಳಗಾರರ ಪರವಾಗಿ ಗದ್ದುಗೆ ಹಿಡಿದ ಎಲ್ಲ ಸರ್ಕಾರಗಳು ಅತೀವ ಲಾಭಕ್ಕಾಗಿ ಕಾರ್ಮಿಕರನ್ನು ತೀವ್ರ ಶೋಷಣೆ ಮಾಡುತ್ತ ತ್ಯಾಗ-ಬಲಿದಾನಗಳಿಂದ ಪಡೆದ ಹಕ್ಕುಗಳನ್ನೇ ಕಿತ್ತುಕೊಳ್ಳುತ್ತಿವೆ. ಅದರಲ್ಲೂ ಜಾಗತೀಕರಣದ ನಂತರ ಕಾರ್ಮಿಕರ ಹಕ್ಕುಗಳ ಮೇಲಿನ ಈ ದಾಳಿಯು ಮತ್ತಷ್ಟು ತೀವ್ರವಾಗಿದೆ. ಇದೀಗ ಕೇಂದ್ರ ಸರ್ಕಾರವು ಲೇಬರ್ ಕೋಡ್‍ಗಳೆಂದು ತಿದ್ದುಪಡಿ ಮಾಡಿದೆ. ಇದರಿಂದಾಗಿ ಸೀಮಿತ ಅವಧಿಯ ಕೆಲಸ, 8 ಗಂಟೆಗೂ ಹೆಚ್ಚಿನ ದುಡಿಮೆ, ಗುತ್ತಿಗೆ ಪದ್ಧತಿ, ಪಿಎಫ್-ಇಎಸ್‍ಐ ಗಳ ಮೇಲಿನ ದಾಳಿ, ಒಟ್ಟಾರೆ ಮಾಲೀಕ ವರ್ಗದ ಲಾಭವನ್ನು ಅತಿಯಾಗಿ ಹೆಚ್ಚಿಸಲು ಕಾರ್ಮಿಕ ವರ್ಗದ ಶೋಷಣೆಯನ್ನು ತೀವ್ರಗೊಳಿಸಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರು ಕೂಡ ಈ ಶೋಷಣೆಯ ಭಾಗವಾಗಿದ್ದು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು, ಎಲ್ಲ ರೀತಿಯ ಶೋಷಣೆಗೆ ಕೊನೆÉಹಾಕಲು ಕಾರ್ಮಿಕ ವರ್ಗದ ವಿಮುಕ್ತಿಯತ್ತ ತಮ್ಮ ಹೋರಾಟದ ಹೆಜ್ಜೆಯನ್ನು ಇಡಬೇಕು ಎಂದು ಅವರುಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಅವರು ಮಾತನಾಡಿ, ರಾಜ್ಯ ಮಟ್ಟದಲ್ಲಿ ಸಂಘವನ್ನು ಬಲಿಷ್ಟವಾಗಿ ಕಟ್ಟಲು ಎಲ್ಲರೂ ಶ್ರಮಿಸಿದ್ದೀರಿ ಮುಂದಿನ ಸವಾಲುಗಳನ್ನು ಎದುರಿಸಲು ಸಂಘವನ್ನು ಮತ್ತಷ್ಟೂ ಸದೃಢಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಬುಡ ಮಟ್ಟದಿಂದ ಸಂಘಟನೆಯನ್ನು ಸಜ್ಜುಗೊಳಿಸಬೇಕು ಎಂದರು. ಸಂಘದ ರಾಜ್ಯ ಉಪಾಧ್ಯಕ್ಷೆ ಕಾ. ರಮಾ ಟಿ.ಸಿ ಅವರು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಆಶಾ ಕಾರ್ಯಕರ್ತೆಯರಿಗೆ ಕ್ರಾಂತಿಕಾರಿ ಶುಭಾಷಯ ಹೇಳಿದರು. ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕಾ. ಕೆ. ರಾಧಾಕೃಷ್ಣ ಅವರು ಕ್ರಾಂತಿಕಾರಿ ಶುಭಾಷಯ ಕೋರಿದ ಸಂದೇಶ ಓದಿದರು.
ಸಂಘದ ರಾಜ್ಯ ಕಾರ್ಯದರ್ಶಿ ಕಾ. ಡಿ. ನಾಗಲಕ್ಷ್ಮಿಯವರು ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಬಹಿರಂಗ ಅಧಿವೇಶನದ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಎಐಎಂಎಸ್‍ಎಸ್ ಮಹಿಳಾ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಶೋಭಾ ಎಸ್., ಹಾಗೂ ಸಂಘದ ರಾಜ್ಯ ಸಮಿತಿಯ ಇತರೆ ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಆಶಾ ಕಾರ್ಯಕರ್ತೆರು ಶಿಸ್ತಿನಿಂದ ಮೆರವಣಿಗೆಯಲ್ಲಿ ಸಾಗುತ್ತಾ-ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 15000ರೂ.ಗಳನ್ನು ನಿಗದಿ ಮಾಡಿ, ಆಶಾಗಳನ್ನು ಕಾರ್ಮಿಕರೆಂದು ಪರಿಗಣಿಸಿ, ಸರ್ಕಾರದ ಒಣ ಮಾತು ಸಾಕು-ಸ್ಪಂದನೆ ಬೇಕು, ರಾಜೀರಹಿತ ಒಗ್ಗಟ್ಟಿನ ಹೋರಾಟ ಚಿರಾಯುವಾಗಲಿ’- ಇತ್ಯಾದಿ ಘೋಷಣೆಗಳು ನಗರದ ಜನತೆಯ ಮನ ಸೆಳೆದವು. ಇದಾದನಂತರ ಸಂಜೆಯಿಂದ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ 2 ದಿನಗಳ ಪ್ರತಿನಿಧಿ ಅಧಿವೇಶನ ಪ್ರಾರಂಭವಾಯಿತು.