ಗಾಂಧೀಜಿ, ಲಾಲ್ ಬಹುದ್ದೂರ್ ಜಯಂತಿ ಆಚರಣೆ
ಬೆಂಗಳೂರು,ಅ.೪: ನಗರದ ಹೆಸರಘಟ್ಟ ರಸ್ತೆಯ ಸಿಡೇದಹಳ್ಳಿಯ ಪ್ರತಿಷ್ಠಿತ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶೂನ್ಯ ಆಹಾರ ಪೋಲು, ಕನಿಷ್ಠ ತ್ಯಾಜ್ಯ ಉತ್ಪಾದನೆ ಮತ್ತು ಕನಿಷ್ಠದಿಂದ ಶೂನ್ಯ ಪ್ಲಾಸ್ಟಿಕ್ ಬಳಕೆ ಎಂಬ ಮೂರಾಂಶಗಳ ಬಗ್ಗೆ ಪ್ರತಿಜ್ನಾವಿಧಿ ಬೋಧಿಸಲಾಯಿತು.
ಇದೇ ವೇಳೆ ಗಾಂಧೀಜಿಯವರ ಭಾವಚಿತ್ರಕ್ಕೆ ಮಕ್ಕಳೆಲ್ಲರೂ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಗಾಂಧೀಜಿಯವರ ಪ್ರೀತಿಯ ತಿನಿಸಾದ ಕಡಲೆಕಾಯಿ ಮತ್ತು ಪೌಷ್ಟಿಕಾಂಶವುಳ್ಳ ಮೇಕೆ ಹಾಲನ್ನು ವಿತರಿಸಲಾಯಿತು.
ಬಳಿಕ ಶಾಲಾ ಮಕ್ಕಳು ಮತ್ತು ಸಿಬ್ಬಂದಿ ಶ್ರಮದಾನ ಮಾಡಿದರು. ಶ್ರಮದಾನದ ವೇಳೆ ಮೊದಲಿಗೆ ಸ್ವ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ನಂತರ ಶಾಲಾವರಣ ಮತ್ತು ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಜ ಹಾಗೂ ನಿಸರ್ಗ ವಿದ್ಯಾನಿಕೇತನ ಸಂಸ್ಥೆಯ ಸಂಸ್ಥಾಪಕ ಡಾ. ಉದಯರತ್ನಕುಮಾರ್, ಶಾಲಾ ಆಡಳಿತಾಧಿಕಾರಿ ಯು. ಧನುಷ್ ಕುಮಾರ್ ವೇದಾಪುರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಭಾರತದ ಸಮಸ್ಯೆಗಳಿಗೆ ಮೂಲ ‘ಸಪ್ತಪಾತಕ’
ಹಲವು ತತ್ವ ಸಿದ್ಧಾಂತಗಳಿಂದ ಬದುಕಿದ್ದ ಗಾಂಧೀಜಿಯವರು ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರ ಉಳಿಯಬೇಕೆಂದು ಹೇಳಿದ ಮಹಾತ್ಮ ಎಂದು ಖ್ಯಾತ ಶಿಕ್ಷಣ ತಜ್ಜ ಡಾ. ರತ್ನಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೆಸರಘಟ್ಟ ರಸ್ತೆಯ ಸಿಡೇದಹಳ್ಳಿಯಲ್ಲಿರುವ ಪ್ರತಿಷ್ಠಿತ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದ ಸಮಸ್ಯೆಗಳಿಗೆ ಮೂಲ ಕಾರಣ ಎಂದರೆ, ಚಾರಿತ್ರ್ಯವಿಲ್ಲದ ಶಿಕ್ಷಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ತತ್ವರಹಿತ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ ಮತ್ತು ತ್ಯಾಗವಿಲ್ಲದ ಪೂಜೆ; ಇವು ಸಪ್ತ ಪಾತಕಗಳಿಂದ ದೂರವಿರಬೇಕೆಂದು ಹೇಳಿದ್ದರು. ಆದರೆ, ಗಾಂಧೀಜಿಯವರ ಆಶಯಗಳು ಎಷ್ಟರಮಟ್ಟಿಗೆ ಸಾಕಾರಗೊಂಡಿವೆ ಎನ್ನುವುದು ಪ್ರತಿಯೊಬ್ಬರು ಅರ್ಥೈಯಿಸಿಕೊಳ್ಳಬೇಕಿದೆ ಎಂದರು.