ಪ್ರಾಣಿ-ಮಾನವ ಸಂಘರ್ಷ ತಪ್ಪಿಸಲು ಸರ್ಕಾರದಿಂದ ಸೂಕ್ತ ಕ್ರಮ
ಧಾರವಾಡ,ಅ4: ಅರಣ್ಯ ನಾಶದಿಂದ ಉಂಟಾಗುತ್ತಿರುವ ಪ್ರಾಣಿ ಮತ್ತು ಮಾನವ ಸಂರ್ಘಷವನ್ನು ತಪ್ಪಿಸಲು ತೊಂದರೆಯಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಮತ್ತು ಅವುಗಳ ಸ್ವಚ್ಛಂದ ಜೀವನವನ್ನು ಉಳಿಸಿ ಬೇಳಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯೆ ವೈಶಾಲಿ ಕುಲಕರ್ಣಿ ಅವರು ಹೇಳಿದರು.
ಅವರು ಅರಣ್ಯ ಇಲಾಖೆಯ ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ವೃತ್ತದಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ರಾಜ್ಯ ಸರ್ಕಾರವು ರಾಜ್ಯದ ವೈವಿಧ್ಯಮಯವಾದ ಅರಣ್ಯ, ಸಸ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಲು ಆಧ್ಯತೆ ನೀಡಿ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಧಾರವಾಡ ಜಿಲ್ಲೆಯು ಅರೆ ಮಲೆನಾಡು ಆಗಿರುವದರಿಂದ ಬೆಳಗಾವಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಭೂಪ್ರದೇಶವನ್ನು ಹೆಚ್ಚು ಅರಣ್ಯೀಕರಣಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅರಣ್ಯ ನಾಶದಿಂದಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಇದರಿಂದ ಮಾನವ ಹಾಗೂ ಪ್ರಾಣಿ ಸಂರ್ಘಷವು ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಅರಣ್ಯ ನಾಶವನ್ನು ತಡೆಗಟ್ಟಲು ಸರ್ಕಾರವು ಅರಣ್ಯ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸಾಮಾನ್ಯವಾಗಿ ನಮ್ಮ ಜಿಲ್ಲೆಯ ಭೂಪ್ರದೇಶವನ್ನು ನೋಡಿದಾಗ ಶೇ. 33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಈಗ ಜಿಲ್ಲೆಯಲ್ಲಿ ಶೇ. 8.5 ರಷ್ಟು ಅರಣ್ಯವಿದೆ. ಜಿಲ್ಲೆಯಲ್ಲಿ ಕನಿಷ್ಠ ಶೇ. 20 ರಷ್ಟು ಭೂಪ್ರದೇಶವನ್ನು ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಎರಡು ಬದಿಯಲ್ಲಿ, ರೈತರ ಹೋಲ-ಬದುಗಳಲ್ಲಿ ಮತ್ತು ಕೆರೆ, ಸರ್ಕಾರಿ ಭೂಮಿ, ಹಳ್ಳದ ಮಗ್ಗಲುಗಳಲ್ಲಿ ವಿವಿಧ ರೀತಿಯ ಮರಗಳ ಸಸಿಗಳನ್ನು ನೆಡಲಾಗುತ್ತಿದೆ. ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಹೆಚ್ಚು ಅರಣ್ಯ ಬೆಳಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ, ಕಾರ್ಯಯೋಜನೆ ವಿಭಾಗದ ಡಿಎಫ್‍ಓ ಪಿ. ಎಸ್. ವರೂರ, ವಲಯ ಅರಣ್ಯ ಅಧಿಕಾರಿ ಪ್ರದೀಪ ಎಸ್. ಪವಾರ, ಡಿಆರ್‍ಎಫ್‍ಓ ಯಲ್ಲಾನಾಯಕ ಹಮಾನಿ ಸೇರಿದಂತೆ ಅರಣ್ಯ ಇಲಾಖೆಯ ಧಾರವಾಡ ವೃತ್ತದ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೂರ್ಣಾ, ಎಂಪವರ್ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.