ಹಾಸ್ಟೆಲ್ ವಾರ್ಡನ್ ಲೋಕಾಯುಕ್ತ ಬಲೆಗೆ
ಕಲಬುರಗಿ,ಸೆ.13-ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಅಡುಗೆ ಸಹಾಯಕರ ಹಾಜರಾತಿಗಾಗಿ 15 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಮೆಟ್ರಿಕ್ ನಂತರ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಗ್ರೂಪ್ (ಡಿ) ಅಡುಗೆ ಸಹಾಯಕರ ಪ್ರತಿ ತಿಂಗಳು ಹಾಜರಾತಿ ನೀಡಲು 20 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದರಲ್ಲದೇ, ಲಂಚ ನೀಡದಿದ್ದರೆ ಹಾಜರಾತಿ ಮತ್ತು ಸಂಬಳ ಮಾಡಲ್ಲ ಎಂದು ಲಂಚಕ್ಕೆ ಕುಮ್ಮಕ್ಕು ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತು ಅಡುಗೆ ಸಹಾಯಕರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದರು. ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಗೀತಾ ಬೇನಾಳ, ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಬಸವರಾಜ, ಸಿಬ್ಬಂದಿಗಳಾದ ಪ್ರದೀಪ್, ಫೈಮುದ್ದಿನ್, ರೇಣುಕಮ್ಮ, ಪೌಡಪ್ಪ, ಸಂತೋಷಮ್ಮ, ಗುಂಡಪ್ಪ ಕಾರ್ಯಚರಣೆ ನಡೆಸಿ ಲಂಚದ ಹಣ ಪಡೆಯುತ್ತಿದ್ದ ವೇಳೆ ವಾರ್ಡನ್‍ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.