ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ,ದಂಡ
ಕಲಬುರಗಿ,ಸೆ.13: ಹೊಲದ ಬಂಡಿದಾರಿ ಮತ್ತು ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಇಲ್ಲಿನ 1 ನೇ ಅಪರ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ.
ಅಫಜಲಪುರದ ಅಶೋಕ ನಗರ ನಿವಾಸಿ ಬಸವರಾಜ ಕೊಲೆ ಪ್ರಕರಣದಲ್ಲಿ ನಾಗೇಶ ಕಲ್ಲಹಿಪ್ಪರಗಿ ( 26).ಕಬೀರ್ ಸೊನ್ನ ( 35),ರಾಜು ಸೊನ್ನ ( 29) ಮತ್ತು ಭೀಮಾಶಂಕರ ಕಲ್ಲಹಿಪ್ಪರಗಿ ( 28) ಶಿಕ್ಷೆಗೊಳಗಾದವರು.
2022 ರ ಏಪ್ರಿಲ್ 11 ರಂದು ಹೊಲದಲ್ಲಿ ಮಲಗಿದ್ದ ಬಸವರಾಜ ಅವರನ್ನು ಈ ನಾಲ್ವರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಈ ಸಂಬಂಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ವಾದವಿವಾದ ಆಲಿಸಿದ 1 ನೇ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ ಶ್ರೀನಾಥ ಅವರು ನಾಲ್ವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಸ್ .ಆರ್ ನರಸಿಂಹಲು ಅವರು ವಾದ ಮಂಡಿಸಿದ್ದರು.