ಚಿಟಗುಪ್ಪ ಪುರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ
ಚಿಟಗುಪ್ಪಾ,ಸೆ 13 : ಚಿಟಗುಪ್ಪಾ ಪಟ್ಟಣದ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಗುರುವಾರ ಜರುಗಿತು.
ನೂತನ ಅಧ್ಯಕ್ಷರಾಗಿ ರೋಜಮ್ಮ ತಿಪ್ಪಣ್ಣ, ಉಪಾಧ್ಯಕ್ಷರಾಗಿ ಮುಜಾಫರ್ ಪಟೇಲ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದರೆ ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಯಿತು. ಪುರಸಭೆಯಲ್ಲಿ ಕಾಂಗ್ರೆಸ್ ನ 13 ಜನ ಸದಸ್ಯರು, ಬಿಜೆಪಿ ಸದಸ್ಯರು 6 ಜೆಡಿಎಸ್ 3 ಸದಸ್ಯರು ಹಾಗೂ ಬಿಎಸ್‍ಪಿ ಯ ಓರ್ವ ಸದಸ್ಯರಿದ್ದರು. ಕಳೆದ ವಾರ ಬಿಜೆಪಿಯ ಕ್ರಿಸ್ತದಾಸ ಮನೋಹರ ವಾರ್ಡ್ 12 ಹಾಗೂ ವಾರ್ಡ್ 13ರ ಬಿ ಎಸ್ ಪಿ ಸದಸ್ಯ ರಾಜದೀಪ್ ಜಾಬಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಒಟ್ಟು 23 ಸದಸ್ಯರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 16 ಮತಗಳನ್ನು ಪಡೆದರು.ಜೆಡಿಎಸ್ ನ ವಾರ್ಡ್ 4ರ ಸದಸ್ಯ ಮಹಮ್ಮದ್ ನಿಸಾ ರೋದ್ದಿನ್ (ತಬರೇಜ್ )ಭಂಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ಇನ್ನಿಬ್ಬರು ಜೆಡಿಎಸ್ ಸದಸ್ಯರು ಚುನಾವಣೆಯಿಂದ ದೂರ ಉಳಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರೋಜಮ್ಮ ತಿಪ್ಪಣ್ಣ ರ ಜಾತಿ ಪ್ರಮಾಣ ಪತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಪಕ್ಷದ ಸದಸ್ಯರು ವಕೀಲರ ಮೂಲಕ ಚುನಾವಣಾ ಅಧಿಕಾರಿಯಾದ ತಹಸಿಲ್ದಾರ ಗೆ ಚುನಾವಣೆ ತಡೆಯುವಂತೆ ಆಕ್ಷೇಪಣೆ ಪತ್ರ ಸಲ್ಲಿಸಿದರು.
ಚುನಾವಣೆ ಸ್ಥಗಿತಗೊಳಿಸಲು ಚುನಾವಣಾ ಅಧಿಕಾರಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳದೇ ಹೊರ ನಡೆದರು.
ಚುನಾವಣೆಗೆ ನಿಗದಿಪಡಿಸಿದ್ದ ನಿರ್ದಿಷ್ಟ ಸಮಯದ ಬಳಿಕ ಚುನಾವಣಾ ಅಧಿಕಾರಿಯಾದ ತಹಸೀಲ್ದಾರ್ ಮಂಜುನಾಥ್ ಪಾಂಚಾಳ್ ಅಧಿಕೃತವಾಗಿ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳನ್ನು ಘೋಷಿಸಿದರು.
ಸನ್ಮಾನ:
ಮಾಜಿ ಸಚಿವ ರಾಜಶೇಖರ್ ಪಾಟೀಲ್, ಎಮ್‍ಎಲ್‍ಸಿ ಭೀಮರಾವ್ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿದರು. ಬಳಿಕ ಪಟ್ಟಣದಲ್ಲಿ ಜರುಗಿದ ವಿಜೇತ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ಸಂಸದ ಸಾಗರ ಖಂಡ್ರೆ ಭಾಗಿಯಾದರು.