ಗಣೇಶ ಚತುರ್ಥಿ ನಿಮಿತ್ಯ ಕೋಲಾಟ
ಬೀದರಃಸೆ.13: ನಗರದ ಗುಮ್ಮೆ ಕಾಲೋನಿಯಲ್ಲಿ ಸೋಮವಾರ ಸಂಜೆ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ವತಿಯಿಂದ ಗಣೇಶ ಚತುರ್ಥಿಯ ನಿಮಿತ್ಯ ಕೋಲಾಟ ಕಾರ್ಯಕ್ರಮ ಜರುಗಿತು. ವಿವಿಧ ವಚನ ಹಾಗೂ ಜಾನಪದ ಗೀತೆಗಳೊಂದಿಗೆ ಎರಡು ಮನೆ, ಮೂರು ಮನೆ, ಏಳು ಮನೆ ಕೋಲಾಟದ ಜೊತೆಗೆ ತಕ್ಕೆಕೋಪ ಕೋಲಾಟ ಪ್ರದರ್ಶನ ಅತ್ಯಂತ ಆಕರ್ಷಕವಾಗಿ ನಡೆಸಿಕೊಟ್ಟರು. ಹಳ್ಳಿ ಸೊಗಡಿನ ಕಲೆಗಳು ನಶಿಸಿ ಹೋಗುತ್ತಿರುವ ಇಂತಹ ದಿನಗಳಲ್ಲಿ ನಗರದ ಪ್ರದೇಶದ ಹೆಣ್ಣು ಮಕ್ಕಳು ಕೋಲಾಟ ಆಡುವ ಮೂಲಕ ಇನ್ನೂ ಹಳೆಯ ಕಲೆಗಳನ್ನು ಜೀವಂತ ಉಳಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ನೂರಂದಪ್ಪ ಬಾಳೂರೆ ಹೇಳಿದರು.
ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ಸದಸ್ಯರಿಗೆ ಕೋಲಾಟ ಕಲಿಸಿಕೊಟ್ಟಂತಹ ಕೋಲಾಟ ಶಿಕ್ಷಕರಾದ ತಳವಾಡನ ನೂರಂದಪ್ಪ ಬಾಳೂರೆ ಹಾಗೂ ಸುನಿತಾ ನೂರಂದಪ್ಪ ಬಾಳೂರೆ ದಂಪತಿಗಳಿಗೆ ಸಂಘದ ವತಿಯಿಂದ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯುವ ಘರ್ಜನೆ ಗಣೇಶ ಮಂಡಳಿಯ ಅಧ್ಯಕ್ಷ ಶ್ರೀಧರ ಮಡಿವಾಳ ಇವರಿಗೆ ಸನ್ಮಾನಿಸಲಾಯಿತು.