ಜನರ ಆರೋಗ್ಯ ಸುಧಾರಿಸುವ ಸಜ್ಜೆ ಬೇಸಾಯ ಮಾಡಿ: ಡಾ. ಸಜ್ಜನ ಕರೆ
ವಿಜಯಪುರ,ಸೆ.13:ಸಜ್ಜೆ ಉತ್ತಮ ಪೋಷ್ಠಿಕಾಂಶಗಳನ್ನು ಹೊಂದಿದ್ದು, ಇದನ್ನು ಹಿಂದೆ ಬಡವರು ಮಾತ್ರ ತಿನ್ನುತ್ತಿದ್ದರು. ಇದೀಗ ಇದು ಶ್ರೀಮಂತರ ಬೆಳೆಯಾಗಿದೆ. ಏಕೆಂದರೆ ಈ ಬೆಳೆಯು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿದ್ದು, ವಿಶೇಷವಾಗಿ ಕಬ್ಬಿಣ ಮತ್ತು ಸತುವಿನ ಪ್ರಮಾಣ ಹೆಚ್ಚಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ ಹೇಳಿದರು.
ಗುರುವಾರ ಅಖಿಲ ಭಾರತ ಸಮನ್ವಯ ಸಜ್ಜೆ ಅಭಿವೃದ್ಧಿ ಯೋಜನೆಯಡಿ, ಕೊಲ್ಹಾರ ತಾಲೂಕಿನ ಕಲಗುರ್ಕಿ ಗ್ರಾಮದ ಪ್ರಗತಿಪರ ರೈತ ದುಂಡಪ್ಪ ದಳವಾಯಿ ಅವರ ಕ್ಷೇತ್ರದಲ್ಲಿ ಹಮ್ಮಿಕೊಂಡ ಸುಧಾರಿತ ಸಜ್ಜೆಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಳಿಗಳಿದ್ದಲ್ಲಿ ಎರಡರಿಂದ ಮೂರು ವರ್ಷ ಬೀಜವನ್ನು ಉಪಯೋಗಿಸಬಹುದು. ಆದರೆ ಸಂಕರಣ ತಳಿಗಳಿದ್ದಲ್ಲಿ, ಪ್ರತಿವರ್ಷ ಬೀಜ ಖರೀದಿಸಬೇಕಾಗುತ್ತದೆ. ಬಿತ್ತನೆಗೆ ಉತ್ತಮ ಗುಣಮಟ್ಟದ ಬೀಜವನ್ನು ಉಪಯೋಗಿಸಬೇಕು. ಕಡಿಮೆ ಖರ್ಚಿನ ಬೀಜೋಪಚಾರ ತಪ್ಪದೇ ಅನುಸರಿಸಬೇಕು. ಬೀಜ ಮೊಳಕೆ ಪರೀಕ್ಷೆ ಮಾಡಬೇಕೆಂದು ಸಲಹೆ ನೀಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಯಾವುದೇ ತಳಿ ಬಿಡುಗಡೆಯಾಗುವ ಮೊದಲು ಅದನ್ನು ಮೂರು ವರ್ಷ ಸ್ವಲ್ಪ ಪ್ರಮಾಣದಲ್ಲಿ ರೈತರ ಕ್ಷೇತ್ರಗಳಲ್ಲಿ ಕ್ಷೇತ್ರ ಪ್ರಯೋಗ ಹಮ್ಮಿಕೊಳ್ಳಲಾಗುವುದು. ಅದು ವಲಯ ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಾಗಾರದಲ್ಲಿ ಬಿಡುಗಡೆಯಾದ ನಂತರ ಅದನ್ನು ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರ ಕ್ಷೇತ್ರದಲ್ಲಿ ಹಮ್ಮಿಕೊಂಡು ನಂತರ ಕ್ಷೇತ್ರೋತ್ಸವಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ ರೈತರು ಬೆಳೆಯಲು ಪ್ರೇರೆಪಿಸಲಾಗುವುದೆಂದರು.
ರೈತರು ಕೃಷಿಯಲ್ಲಿ ನೂತನ ತಾಂತ್ರಕತೆಗಳನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಲು ಹೇಳಿದರು.
ಸಜ್ಜೆ ತಳಿ ತಜ್ಞ ಡಾ. ಬಿ.ಕೆ. ಅಥೋನಿ ಮಾತನಾಡಿ, ಸಜ್ಜೆಯಲ್ಲಿ ವಿಪಿಎಮ್‍ಎಚ್-14 ನೂತನ ತಳಿ ಬಿಡುಗಡೆಗೊಳಿಸಿದ್ದು, ಇದು ಉತ್ತಮ ಬೆಳವಣಿಗೆ ಹೊಂದಿ ಎಕರೆಗೆ 8-10 ಕ್ವಿಂಟಲ್ ಇಳುವರಿ ಕೊಡುತ್ತದೆ. ಜೊತೆಗೆ 4-5 ಟನ್ ಮೇವು ಒದಗಿಸುತ್ತದೆ. ಈ ತಳಿಯಲ್ಲಿ 70 ಮಿ.ಗ್ರಾಂ ಕಬ್ಬಿಣ ಮತ್ತು 40 ಮಿ.ಗ್ರಾಂ ಸತುವಿನ ಪೋಷಕಾಂಶಗಳಿದ್ದು, ರೊಟ್ಟಿಯೂ ಕೂಡ ಚೆನ್ನಾಗಿ ಆಗುತ್ತಿವೆ. ಇದರಿಂದ ಅನೇಕ ಪ್ರಯೋಜನಗಳಿವೆ ಎಂದರು.
ಬೇಸಾಯ ತಜ್ಞೆ ಡಾ. ಸಾಧನಾ ಬಾಬರ ಸಜ್ಜೆಯಲ್ಲಿರುವ ಸುಧಾರಿತ ಬೇಸಾಯ ಕ್ರಮಗಳಾದ ಬಿತ್ತನೆ ಅಂತರ, ರಸಗೊಬ್ಬರ ಬಳಕೆ, ಅಂತರಬೇಸಾಯ, ಕಳೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಡಾ. ಎಸ್. ಬಿ. ಜಗ್ಗಿನವರ ಮತ್ತು ಡಾ. ಎಸ್. ಎಸ್. ಕರಭಂಟನಾಳ ಸಜ್ಜೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಹಾಗೂ ಸಜ್ಜೆ ಬೆಳೆಗೆ ತಗಲುವ ಯರ್ಗಾಟ್ ರೋಗ, ತುಕ್ಕುರೋಗ ಮತ್ತು ಎಲೆಚುಕ್ಕೆ ರೋಗಗಳ ಲಕ್ಷಣಗಳು ಮತ್ತು ಹತೋಟಿ ಕ್ರಮಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೂಳಪ್ಪ ಕೋಟಗೊಂಡ, ಸದಸ್ಯರಾದ ಧೂಳಪ್ಪ ಸಿಂದೆ, ಮಂಜು ಕಸನಕ್ಕಿ, ಆನಂದ ಕುದರಿ, ಮುತ್ತು ಚೌವರಿ, ಮುದಕಣ್ಣ ಮಮದಾಪೂರ, ಹನಮಂತ ಹರಿಜನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಮಹದೇವ ನುಚ್ಚಿ, ನಾಗೇಶ ಪೂಜಾರಿ, ರೈತರಾದ ಮಲ್ಲಿಕಾರ್ಜುನ ಆಕಳವಾಡೆ, ಮಹದೇವಪ್ಪ ಘೋರ್ಪಡೆ, ಸೇರಿದಂತೆ ಕಲಗುರ್ಕಿ, ಮುಳವಾಡ, ಮಲಘಾಣ ಗ್ರಾಮದ ರೈತರು ಭಾಗವಹಿಸಿದ್ದರು.