ವೈಭವದಿಂದ ನಡೆದ ಸಂಗಮೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ
ಭಾಲ್ಕಿ:ಸೆ.13:ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಸಂಗಮೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನೆರವೇರಿತು.
ಶ್ರಾವಣ ಮಾಸದ ಅಂಗವಾಗಿ ತಿಂಗಳ ಪಯರ್ಂತ ಸಂಗಮೇಶ್ವರ ದೇವಸ್ಥಾನದಲ್ಲಿ ಭಜನೆ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದವು.
ಸೋಮವಾರ ಪ್ರಸಾದ ದಾಸೋಹ ಮತ್ತು ಮಂಗಳವಾರ ಸಂಗಮೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ಶ್ರಾವಣ ಮಾಸ ಮಂಗಲಗೊಂಡಿತು.
ಗ್ರಾಮದಲ್ಲಿ ರೇವಣಸಿದ್ದಯ್ಯ ಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಸಂಗಮೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಅಸಂಖ್ಯಾತ ಭಕ್ತರ ಮಧ್ಯೆ ಭಾಜಾ ಭಜಂತ್ರಿಯೊಂದಿಗೆ ಸಂಭ್ರಮದಿಂದ ಜರುಗಿತು. ಸಂಗಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಮತ್ತು ಸಂಗಮೇಶ್ವರ ದೇವರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆ, ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಸಂಗಮೇಶ್ವರ ದೇಗುಲದಲ್ಲಿ ಕೊನೆಗೊಂಡಿತು.
ಗ್ರಾಮದ ಮುತ್ತೈದೆಯರು ಕುಂಭ ಕಳಸ ಹೊತ್ತು ಮೆರವಣಿಗೆ ವೈಭವ ಹೆಚ್ಚಿಸಿದರು. ಭಕ್ತರು ತಮ್ಮ ಮನೆಗಳ ಮುಂದೆ ಸಂಗಮೇಶ್ವರ ದೇವರ ಪಲ್ಲಕ್ಕಿಗೆ ಕಾಯಿ, ಕರ್ಪೂರ ಅರ್ಪಿಸಿ, ಪೂಜೆ ನೆರವೇರಿಸಿ ಧನ್ಯತಾ ಭಾವ ಮೆರೆದರು. ದಾರಿಯುದ್ದಕ್ಕೂ ದೇವರ ಘೋಷಣೆ, ಮಂತ್ರ ಮೊಳಗಿದ್ದವು. ದೇಗುಲದ ಕಮಿಟಿ ಸೇರಿ ಗ್ರಾಮಸ್ಥರು ಇದ್ದರು.