ವಿವೇಕದ ಪ್ರಜ್ಞೆ ಉತ್ತುಂಗದ ಮೆಟ್ಟಿಲು: ಹಾರಕೂಡ ಶ್ರೀ
ಬಸವಕಲ್ಯಾಣ:ಸೆ.13: ವಿವೇಕದ ಪ್ರಜ್ಞೆಯಿಂದ ಶ್ರಮಿಸಿದ ಪ್ರತಿ ಹೆಜ್ಜೆಯೂ ಕೂಡ ಮನುಷ್ಯನ ಬಾಳಿನ ಉತ್ತುಂಗದ ಮೆಟ್ಟಿಲು ಎಂಬುದನ್ನು ಗ್ರಹಿಸಬೇಕು, ಇಂತಹ ವಿವೇಕದ ಬೆಳಕಿನಲ್ಲಿ ಸಾಗುವ ಪ್ರತಿಯೊಬ್ಬರ ಬಾಳು ಸಂತ್ರಪ್ತಿಯಿಂದ ಕೂಡಿರುತ್ತದೆ ಎಂದು ಹಾರಕೂಡನ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಗ್ರಾಮದ ಪ್ಯಾಟಿ ಬಡಾವಣೆಯ ಶ್ರೀ ಚನ್ನಬಸವೇಶ್ವರ ಭಜನಾ ಮಹಾಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭಜನೆ ಅಂತರಂಗ ಸುದ್ದಿಯ ಒಂದು ಪ್ರಮುಖ ಸಾಧನವಾಗಿದ್ದು, ಇದರಿಂದ ದೊಡ್ಡ ದೊಡ್ಡ ಅಧ್ಯಾತ್ಮ ಸಾಧನೆಯಾಗಿರುವುದು ನಮ್ಮ ಪರಂಪರೆಯಲ್ಲಿ ಕಾಣಸಿಗುತ್ತದೆ.
ನಂಬಿದ ದೈವ ಸನ್ನಿಧಿಯನ್ನು ನಿತ್ಯವೂ ಶ್ರದ್ಧೆಯಿಂದ ಭಜಿಸುವುದರಿಂದ ಮನದ ಮೈಲಿಗೆ ತೊಳೆದು ಪವಿತ್ರ ಭಾವ ಉಂಟಾಗುತ್ತದೆ.
ಸಂಸಾರದ ಭಾರ ಹಗರಗೊಂಡು ವಿವೇಕದ ಬೆಳಕು ಚಿಮ್ಮುತ್ತದೆ.
ಇದರಿಂದ ಮನುಷ್ಯನ ಹೃದಯ ಮತ್ತು ಮನಸ್ಸು ಪ್ರಫುಲಗೊಂಡು ನಿರಾಳತೆ ಏರ್ಪಡುತ್ತದೆ.
ಮನಸ್ಸಿನ ಏಕಾಗ್ರತೆ ಅವಧಾನ ಇಮ್ಮಡಿಗೊಂಡು ಶಾಂತಿ ಸಮಾಧಾನದಿಂದ ಬದುಕುವಂತಾಗುತ್ತದೆ.
ಹಾರಕೂಡ ಗ್ರಾಮದ ಪ್ಯಾಟಿ ಓಣಿಯ ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿಯ ಎಲ್ಲಾ ಭಕ್ತರ ಸೇವೆ ಶ್ಲಾಘನೀಯವಾಗಿದ್ದು, ಅವರ ನಿರಂತರ ಸೇವೆಗೆ ಹಾರಕೂಡ ಅಜ್ಜನವರ ಶ್ರೀರಕ್ಷೆ ಶಾಶ್ವತವಾದ ರಕ್ಷಾ ಕವಚವಾಗಿ ಪರಿಣಮಿಸಿ, ಎಲ್ಲರ ಬದುಕು ಮಂಗಳಕರವಾಗಲೆಂದು ಶುಭ ಹಾರೈಸಿದರು.
ಅರುಣ ಗುದಗೆ ಸ್ವಾಗತಿಸಿದರು.
ಕಾಶಪ್ಪ ದೇಗಾಂವ ವಂದಿಸಿದರು.
ರೇವಣಸಿದ್ದಯ್ಯ ಹಿರೇಮಠ, ಶ್ರೀನಿವಾಸ ಶಿಂಧೆ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಶ್ರೀ ಚನ್ನಬಸವೇಶ್ವರ ಭಜನಾ ತಂಡದವರು ಭಜನೆ ಸೇವೆ ಸಲ್ಲಿಸಿದರು.
ವಿಜಯಕುಮಾರ ಕುಲಕರ್ಣಿ ಸಂಗೀತ ಸೇವೆ ಸಲ್ಲಿಸಿದರು.
ಚಿತ್ರ : ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಸಾಯಂಕಾಲ ಜರುಗಿದ ಹಾರಕೂಡ ಗ್ರಾಮದ ಪ್ಯಾಟಿ ಬಡಾವಣೆಯ ಶ್ರೀ ಚನ್ನಬಸವೇಶ್ವರ ಭಜನಾ ಮಹಾಮಂಗಲ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ವಿಜಯಕುಮಾರ ಸಂಗೋಳಗೆ, ಅರುಣ ಗುದಗೆ, ಡಾ. ರಾಜಶೇಖರ ಮದರಿ, ನಾಗಣ್ಣ ಪೀರಜೆ, ಬಸವಂತ ಪೂಜಾರಿ, ಸೋಮಣ್ಣ ಬೆಳಮಗೆ, ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.