ಆತ್ಮಹತ್ಯೆ ತಡೆಗೆ ಜಾಗೃತಿ ಅಗತ್ಯ
ಬಾಗಲಕೋಟೆ,ಸೆ13: ಇತ್ತೀಚಿನ ದಿನಗಳಲ್ಲಿ ಯುವಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಸಿ.ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾರಾಗೃಹ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಭರವಸೆ ತುಂಬುವ ಕೆಲಸವಾಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಮನೋವೈದ್ಯೆ ಡಾ.ಸೌಮ್ಯ ಪಾಟೀಲ ಮಾತನಾಡಿ ಅಲ್ಪ ಖುಷಿ ಪಡದುಕೊಳ್ಳಲು ಕೈಗೊಂಡ ಚಟಗಳಿಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆತ್ಮಹತ್ಯೆ ಪ್ರಕರಣಗಳು ಸಾಮಾಜಿಕ, ಆರ್ಥಿಕ, ಕುಟುಂಬ ಮತ್ತು ವೈಯಕ್ತಿಕ ಅವಧಿಗಳಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತಿದ್ದು, ಇದರಿಂದ ಹೊರಬರಲು ಪ್ರಯತ್ನಿಸಬೇಕು ಅಂದಾಗ ಮಾತ್ರ ಇದರಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ವಿಷಯ ಪರಿವೀಕ್ಷಕ ವಾಯ್.ಬಿ.ಸಾಲಿ ಮಾತನಾಡಿ, ಮೊಬೈಲ್ ಅತೀಯಾದ ಬಳಕೆ ಕೂಡಾ ಒಂದು ವ್ಯಸವಾಗಿ ಪರಿಣಮಿಸುತ್ತಿದೆ. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯುವ ಕಾರ್ಯವಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಮಾತನಾಡಿ ವ್ಯಸನಿಗಳು ಸ್ವಯಂ ಪ್ರೇರಣೆಯಿಂದ ಬಿಟ್ಟು, ಪರಿವರ್ತನೆ ಆಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬೆಲೆ ಸಿಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಜೈಲರ್ ಎಂ.ಡಿ.ಸೌದಗರ, ಗೀತಾ ಮಾಲಗಾರ, ಶೂಶ್ರೂಸಕ ಅಧಿಕಾರಿ ಎ.ಎಂ.ಬದ್ರಣ್ಣವರ, ಮುಖ್ಯ ವೀಕ್ಷಕ ಆರ್.ಎಸ್.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂತೋಷ ಐಹೊಳೆ ವಂದಿಸಿದರು. ನಾಗರಾಜ ತಾಳಿಕೋಟಿ ನಿರೂಪಿಸಿದರು.