ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ ನಾಲ್ವರು ಸೆರೆ
ಬೆಂಗಳೂರು, ಸೆ.೧೩-ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಗಳನ್ನು ಅಂಗಡಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದ ಮೂವರನ್ನು ಜಗಜೀವರಾಮನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಲ್ಸನ್ ಗಾರ್ಡನ್ ನ ಮಹಮ್ಮದ್ ಜವಾದುಲ್ಲ(೫೩) ಶಾಮಣ್ಣಗಾರ್ಡನ್ ನ ಮುಜಿಬ್‌ವುರ್( ೨೧)ಉಮೇಜ್ ಖಾನ್ ( ೨೦) ಹಾಗೂ ವಿನಾಯಕನಗರ ಮೊಹಮ್ಮದ್ ಮಜರ್(೩೮) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಬಂಧಿತರಿಂದ ೧.೫೦ ಲಕ್ಷ ಮೌಲ್ಯದ ೧೦೬ ನಿಷ ಎಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪಾದರಾಯನಪುರದ ಅರ್ಬನ್ ಕ್ಲಾತಿಂಗ್ ಕಟ್ಟಡದ ಪಕ್ಕದ ಬಿಲ್ಡಿಂಗ್‌ನಲ್ಲಿ ಆರೋಪಿ ಮೊಹಮ್ಮದ್ ಮಜರ್ ಇತರ ಆರೋಪಿಗಳು ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಮೊಬೈಲ್ ಸುಲಿಗೆಕೋರರ ಸೆರೆ:
ಕಳೆದ ಸೆ.೪ ರಂದು ರಾಜಾಜಿನಗರದ ವಿಷ್ಣುವರ್ಧನ್ ಅವರು ಕಂಪನಿಯಲ್ಲಿ ಕೆಲಸವನ್ನು ಮುಗಿಸಿಕೊಂಡು ಪಿಜಿ ಗೆ ಹೋಗಲು ಸುಂಕದಕಟ್ಟೆ ವೈಲ್ಡ್‌ಕ್ರಾಪ್ ಕಂಪನಿ ಮುಂಭಾಗದ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ಹೋಗುವಾಗ ಬೈಕ್ ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದ ಹಾರೋಹಳ್ಳಿಯ ಚೇತನ್, ಸುಂಕದಕಟ್ಟೆಯ ಶ್ರೀನಿವಾಸನಗರದ ನವೀನ್ ಕುಮಾರ್ ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೧.೭೦ ಲಕ್ಷ ಮೌಲ್ಯದ ೧೨ ಮೊಬೈಲ್ ಗಳು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯ, ಗೋವಿಂದರಾಜನಗರ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.