ನಕಲಿ ವೈದ್ಯರಿಗೆ ಲಕ್ಷ ರೂ. ದಂಡ
ದಾವಣಗೆರೆ,ಸೆ.೧೩-ವೈದ್ಯಕೀಯ ಪ್ರಮಾಣ ಪತ್ರ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ತಲಾ ೧ ಲಕ್ಷ ರೂ. ದಂಡ ವಿಧಿಸಿದ್ದಾರೆ.ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ನಕಲಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಲಾಗಿದೆ. ಇಬ್ಬರಿಗೂ ತಲಾ ೧ ಲಕ್ಷ ರೂ. ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ಮೂಲದ ಶ್ರೀನಿವಾಸ್ (೫೭) ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹಲವು ವರ್ಷಗಳಿಂದ ಮೆಡಿಕಲ್ ಸ್ಟೋರ್ ಜೊತೆಗೆ ಅನಧಿಕೃತ ಕ್ಲಿನಿಕ್ ನಡೆಸಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.ಈತ ಪಡೆದಿದ್ದ ಮೆಡಿಕಲ್ ಸ್ಟೋರ್ ಲೈಸೆನ್ಸ್ ಸಹ ರದ್ದುಪಡಿಸಿ ದಂಡ ವಿಧಿಸಲಾಗಿದೆ.
ಮತ್ತೊಬ್ಬ ನಕಲಿ ವೈದ್ಯ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಲಕ್ಷ್ಮಣ್ (೪೫) ಎಂಬಾತ ಹೊನ್ನಾಳಿ ತಾಲೂಕಿನ ಕಾಸಿನಕೆರೆ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದ.ಕ್ಲಿನಿಕ್ ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಲಭ್ಯವಾಗಿದೆ ಎಂದು ತಿಳಿಸಿಲಾಗಿದೆ .ಆದರೆ ಇದು ಅಮಾನ್ಯ ಪ್ರಮಾಣಪತ್ರವಾಗಿರುವುದರಿಂದ ಅದನ್ನು ನಕಲಿ ಎಂದು ಪರಿಗಣಿಸಿ ರೂ.೧ ಲಕ್ಷ ದಂಡ ವಿಧಿಸಿದೆ.
ಉಪವಿಭಾಗಾಧಿಕಾರಿ: ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳದಲ್ಲೇ ತನಿಖೆ ನಡೆಸಿ ನಕಲಿ ಕ್ಲಿನಿಕ್ ಗಳ ಕುರಿತು ಸಮಗ್ರ ವರದಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೋಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.