ಹೊಸಪೇಟೆಯಲ್ಲಿ ಮತ್ತೆ ಅರಳಿದ ಕಮಲ,  ಕಮರಿದ ‘ಕೈ”ಸರ್ಕಾರ, ಸಂಸದ, ಶಾಸಕ ಸಂಖ್ಯಾಬಲವಿದ್ದರೂ ಫಲಿಸದ ಕೈ ಪ್ರಯತ್ನ.
*ಮುಖ್ಯಾಂಶಗಳು*
* ಬಿಜೆಪಿ ರೂಪೇಶ,ರಮೇಶ್ ಅಧ್ಯಕ್ಷ, ಉಪಾಧ್ಯಕ್ಷ.
* ಶಾಸಕ, ಸಂಸದ ಬಂದೂ ಆಗದ ಪ್ರಯೋಜನ. 
* ಕಾಂಗ್ರೆಸ್ ನ ಸದಸ್ಯ ಮಹೇಶ್  ಗೈರು.
* ಕೈ 12,  ಸ್ವತಂತ್ರರು 12, ಬಿಜೆಪಿ 10, ಆಪ್1
*   ಕಮಲ ಅರಳಿದ್ದು ಒಗ್ಗಟ್ಟಿಗೆ.
*   ಕಾಂಗ್ರೆಸ್ ಕಮರಿದ್ದು ಒಡಕಿಗೆ.
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಸೆ 13: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಎಲ್ಲಾ ಪ್ರಭಾವದ ನಡುವೆ ಹೊಸಪೇಟೆ ನಗರಸಭೆಯ ಚುಕ್ಕಾಣಿ ಈ ಬಾರಿ ಕೈ ತೆಕ್ಕೆಗೆ ಬರುವುದು ನಿಶ್ಚಿತ ಎಂಬ ನಿರೀಕ್ಷೆಯನ್ನು ಕೊನೆಯ ಕ್ಷಣದಲ್ಲಿ ಹುಸಿಗೊಳಿಸಿರುವ ಕಮಲ ಅರಳಿ ’ಅನಂದವನ್ನು  ತೇಲಿಸುವಲ್ಲಿ ಯಶಸ್ವಿಯಾಗಿದೆ.
5ನೇ ವಾರ್ಡ್‌ನ ಸದಸ್ಯ ಎನ್‌.ರೂಪೇಶ್‌ ಕುಮಾರ್ ಅಧ್ಯಕ್ಷರಾಗಿ ಹಾಗೂ 29ನೇ ವಾರ್ಡ್‌ನ ಜೆ.ಎಸ್ರ. ರಮೇಶ್ ಗುಪ್ತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 19 ಮತ ಪಡೆದು ನಗುವಿನ ನಗೆ ಬೀರಿದರು  ಹಾಗೂ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಸ್ಲಾಂ ಮಾಳ್ಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ರಾಘವೇಂದ್ರ ಅವರಿಗೆ 17 ಮತಗಳು ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್‌ನ ಒಬ್ಬ ಸದಸ್ಯ ಕೆ.ಮಹೇಶ್ ಗೈರಾಗಿದ್ದರು ಎಂದು ಚುನಾವಣಾ ಅಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ವಿವೇಕಾನಂದ ಅವರು ಗುರುವಾರ ಸಂಜೆ ಪ್ರಕಟಿಸುತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷ ಮುಗಿಲು ಮುಟ್ಟಿತು. ಬಾಣ ಬಿರುಸು ಹಲಗೆ ವಾದ್ಯದೊಂದಿಗೆ ಆನಂದದ ನಗೆ ಮುಗಿಲು ಮುಟ್ಟಿತು.
ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್.ಗವಿಯಪ್ಪ ಅವರು ಸ್ವತಃ ಮತ ಚಲಾಯಿಸಲು ಬಂದಿದ್ದರು. ಈಗಾಗಲೇ  ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದ ಇಬ್ಬರು ಪಕ್ಷೇತರ ಸದಸ್ಯರನ್ನು ತಮ್ಮತ್ತ ಸೆಳೆಯುವಲ್ಲಿ ಪಕ್ಷ ವಿಫಲವಾಯಿತು. ಒಬ್ಬ ಎಎಪಿ ಸದಸ್ಯ ಮತ್ತು ಮೂವರು ಪಕ್ಷೇತರ ಸದಸ್ಯರ ಬೆಂಬಲ ಗಳಿಸಲಷ್ಟೇ ಸಾದ್ಯವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೋಲು ಒಪ್ಪಿಕೊಂಡಿತು.
‘ನಮಗೆ ಸಂಖ್ಯಾಬಲ ಇರಲಿಲ್ಲ, ಕಳೆದ ಬಾರಿ ಸಹ ಬಹುತೇಕ ಪಕ್ಷೇತರ ಸದಸ್ಯರು ಬಿಜೆಪಿ ಬೆಂಬಲಿಸಿದ್ದರು. ಈ ಬಾರಿ ನಾಲ್ವರನ್ನು ಪಕ್ಷದತ್ತ ಒಲಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ,  ಆದರೆ ಬಹುಮತ ಗಳಿಸಲು ಎರಡು ಮತಗಳಿಂದ ಹಿಂದೆ ಬಿದ್ದಿದ್ದೇವೆ’ ಎಂದು ಸಂಸದ ಇ.ತುಕಾರಾಂ ಬಳಿಕ ಮಾಧ್ಯಮದವರಿಗೆ ತಿಳಿಸಿದರು.
ಜವಾಬ್ದಾರಿ ಹೆಚ್ಚಿದೆ:
ನಾಯಿ ಹಾವಳಿ ತಡೆಗೆ ತಕ್ಷಣ ಕ್ರಮ: ‘ಬೀದಿ ನಾಯಿ ಹಾವಳಿ ತಡೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ ನಗರದ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿಯ ಹೂಳು ತೆಗೆದು ನೀರು ಸರಾಗವಾಗಿ  ಹರಿಯುವಂತೆ ಮಾಡಲು 1.50  ಕೋಟಿ ವೆಚ್ಚದ ಯಂತ್ರ ತರಿಸಿ ಕಾರ್ಯಾಚರಣೆ  ನಡೆಸುವ ಯೋಚನೆ ಇದೆ’ ನಮ್ಮ ಮೇಲೆ ಎಲ್ಲರೂ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ ನಗರಾಭಿವೃದ್ಧಿ ಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ರೂಪೇಶ್‌ ಕುಮಾರ್ ತಿಳಿಸಿದರು.
‘ನಗರದಲ್ಲಿ ಇನ್ನು ಮುಂದೆ ಅಭಿವೃದ್ಧಿಗೆ ವೇಗ ಸಿಗುವುದು ನಿಶ್ಚಿತ’ ಎಂದು  ಉಪಾಧ್ಯಕ್ಷ ರಮೇಶ್‌ ಗುಪ್ತ  ಸಹ ತಮ್ಮ ಹರ್ಷ ವ್ಯಕ್ತಪಡಿಸಿದರು.
ಸಂಭ್ರಮಾಚರಣೆ: ಗುರುವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಮೆರವಣಿಗೆ ನಡೆಯಿತಲ್ಲದೆ, ಕಾರ್ಯಕರ್ತರು  ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೈ ಸೋತಿದ್ದು, ಬಿಜೆಪಿ ಗೆದ್ದಿದ್ದು ಹೇಗೆ?
ಕಾಂಗ್ರೆಸ್‌ನ ಕೆ.ಮಹೇಶ್‌ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಮಣೆ ಹಾಕದ್ದರಿಂದ ಅವರು ಮತದಾನದಿಂದ ದೂರ ಉಳಿದರು. ಇಬ್ಬರು ಪಕ್ಷೇತರ ಸದಸ್ಯರಾದ ಶಾಂತಾ ಮತ್ತು ಗೌಸಿಯಾ ಅವರು ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ದೇ ಕಾಂಗ್ರೆಸ್ ಲೆಕ್ಕಾಚಾರವೆಲ್ಲ ತಲೆಕೆಳಗಾಗುವಂತೆ ಮಾಡಿತು ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಬಿಜೆಪಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಗರಡಿಯಲ್ಲಿ  ಸದ್ದಿಲ್ಲದೆ ತನ್ನ ಕಾರ್ಯತಂತ್ರ ಹೆಣೆದು 9 ಮಂದಿ ಪಕ್ಷೇತರ ಸದಸ್ಯರ ಬೆಂಬಲ ದೊರಕಿಸಿಕೊಳ್ಳುವಲ್ಲಿ ಸಫಲವಾಯಿತು. ಈ ಹಿಂದೆ ಬೆಂಬಲ ನೀಡಿದ್ದ ನಾಲ್ವರು ಕೈಕೊಟ್ಟರು ಸಹ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತನ್ನಲ್ಲಿಯೇ ಉಳಿಸಿಕೊಳ್ಳುವುದಲ್ಲಿ ಅದು ಯಶಸ್ವಿಯಾಯಿತು.
ಒಗ್ಗಟ್ಟಿನ ಕೊರತೆಗೆ ತೆತ್ತ ಬೆಲೆ?
‘ಕಾಂಗ್ರೆಸ್‌ ಒಂದು ಮನೆ, ಆರು ಬಾಗಿಲು ಎಂಬಂತಹ ಸ್ಥಿತಿಯಲ್ಲಿದೆ. ಒಗ್ಗಟ್ಟಿನ ಕೊರತೆಯೇ ನಗರಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ. ಕೆಪಿಸಿಸಿ ಮೇಲೆಯೇ ಪ್ರಭಾವ ಬೀರುವಂತಹ ‌ಮುಖಂಡರೇ ಇಲ್ಲಿದ್ದಾರೆ, ಆದರೆ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅದರ ಫಲವನ್ನು ಉಣ್ಣಬೇಕಾಗಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಬೇಸರದಿಂದಲೇ ನುಡಿದರು.