ಕುಡುತಿನಿ ಪ್ರದೇಶದಲ್ಲಿ ಕೈಗಾರಿಕೆಗಳಿಗೆ  ಸ್ವಾಧೀನ ಪಡಿಸಿಕೊಂಡಿರುವ  ರೈತರ ಭೂಮಿಗೆ ನ್ಯಾಯದ ಬೆಲೆ ನೀಡಲು ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ ಸೆ.13–ಜಿಲ್ಲೆಯ ಕುಡಿತೆನಿ ಪ್ರದೇಶದ ಆರ್ಸೆಲರ್ ಮಿತ್ತೆಲ್ , ಭ್ರಾಹ್ಮಣಿ , ಎನ್.ಎಂ.ಡಿ.ಸಿ. ಸ್ಟೀಲ್ ಕೈಗಾರಿಕೆಗಳಿಗಾಗಿ ಸ್ವಾಧೀನ ಪಡಿಸಿಕೊಂಡ ಸುಮಾರು 12,500 ಎಕರೆ ಭೂಮಿಯ ಮೋಸದ ಭೂ ಬೆಲೆ ರದ್ದು ಪಡಿಸಿ ನ್ಯಾಯ ಒದಗಿಸುವ ಕುರಿತಂತೆ ಮಾತುಕತೆ ಸಭೆ ಕರೆಯಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿ ಗಳಿಗೆ  ಪತ್ರ ಬರೆದಿರುವುದಾಗಿ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ್ ತಿಳಿಸಿದ್ದಾರೆ
ಕಳೆದ ನವೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಸಲಾದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ತಮ್ಮ ಮತ್ತು ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ರವರ ನೇತೃತ್ವದಲ್ಲಿ ರಾಜ್ಯ ಕೆಐಐಡಿಬಿ ಅಧಿಕಾರಿಗಳು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರ ಸಮ್ಮುಖದಲ್ಲಿ ಭೂ ಸಂತ್ರಸ್ಥ ರೈತರ ಜೊತೆ ಮಾತುಕತೆ ಮಾಡಿದುದು ಸರಿಯಷ್ಟೇ? ಆ ಸಭೆಯಲ್ಲಿ ಎಂ.ಬಿ. ಪಾಟೀಲ್ ರವರು ಭೂ ಸಂತ್ರಸ್ಥ ರೈತರಿಗೆ ಮೇಲೆ ಹೇಳಲಾದ ಮೂರು ಕಂಪನಿಗಳಿಗೆ ಸ್ವಾಧೀನ ಪಡಿಸಿಕೊಂಡ ಸುಮಾರು 12,500 ಎಕರೆ ಭೂ ಬೆಲೆ ನಿಗದಿಯಲ್ಲಾದ ಮೋಸವನ್ನು ಪರಿಶೀಲಿಸಿ ರೈತರಿಗೆ ನ್ಯಾಯ ನೀಡುವುದಾಗಿ ಮತ್ತು ಅದಕ್ಕಾಗಿ ಮತ್ತೊಂದು ಬಾರಿ ರೈತರ ಸಭೆ ಕರೆದು ಸರಿಪಡಿಸುವುದಾಗಿ ತಿಳಿಸಿದ್ದರು. ಮತ್ತು ತಾವು ಬ್ರಾಹ್ಮಣಿ ಸ್ಟೀಲ್ಸ್ ಕಂಪನಿ ವಿಚಾರದಲ್ಲಿ, ಅವರು ರಿಯಲ್ ಎಸ್ಟೇಟ್ ಮಾಡಿದ್ದಾರೆ. ಹಾಗೆ ಮಾಡುವುದು ವಂಚನೆ ಎಂದಿದ್ದೀರಿ.
ಆದರೆ ಸಭೆ ನಡೆದು 10 ತಿಂಗಳು ಕಳೆದರೂ, ತಾವು ಮತ್ತು  ಎಂ.ಬಿ. ಪಾಟೀಲ್ ರವರು ಭೂ ಬೆಲೆಯಲ್ಲಾದ ಮೋಸದ ಕುರಿತು ಪರಿಶೀಲಿಸಿ ತಮ್ಮ ಅಭಿಪ್ರಾಯ ಹೇಳುವ ರೈತರ ಸಭೆಯನ್ನು ಕರೆಯಲಿಲ್ಲ.
ಇತ್ತ ಕಡೆ ರೈತರು ಕಳೆದ 635 ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ. ಈ‌ ಹಿನ್ನಲೆಯಲ್ಲಿ ರೈತರಿಗೂ, ಸರಕಾರಕ್ಕೂ ಮತ್ತು ಕಂಪನಿಗೂ ಅನ್ಯಾಯವಾಗದ ಪರಿಹಾರ ವನ್ನು ನಿಮ್ಮ ಮುಂದಿಡುತ್ತಿದ್ದೇವೆ .
ಕೆಐಏಡಿಬಿ ಭೂ ಸ್ವಾಧೀನ ಮಾಡಿರುವುದು ಒಟ್ಟು 7 ಗ್ರಾಮಗಳ 12,500 ಎಕರೆಗೂ ಹೆಚ್ಚು ಜಮೀನು. ಆದರೆ ಮೂರು ಕಂಪನಿಗಳಿಗೆ ಬೇಕಾಗಿರುವುದು ಕೇವಲ ಅದರ ಅರ್ದದಷ್ಟು ಜಮೀನು ಮಾತ್ರವೇ ಆಗಿದೆ. ಅದನ್ನು ಬಿಟ್ಟು ಉಳಿದ ಜಮೀನನ್ನು ಕೆಐಏಡಿಬಿ ಅಭಿವೃದ್ಧಿ ಪಡಿಸಿ, ರೈತರಿಗೆ ತಲಾ ಅರ್ದದಷ್ಟು (ಶೇ.50) ಜಮೀನು ಹಿಂದಿರುಗಿಸಿದರೂ ರೈತರಿಗೆ ಪೂರ್ಣವಲ್ಲದಿದ್ದರೂ ಸ್ವಲ್ಪವಾದರೂ ನ್ಯಾಯ ದೊರೆಯಲಿದೆ.ಮತ್ತು
ಇದುವರೆಗೆ ಉದ್ಯೋಗ ನೀಡದಿರುವುದಕ್ಕೆ ಕನಿಷ್ಠ ಪ್ರತಿ ರೈತ ಕುಟುಂಬಕ್ಕೆ 2014 ರಿಂದ ಈ ಹತ್ತು ವರ್ಷಗಳಿಗೆ ಆಗುವ (ತಿಂಗಳಿಗೆ 20,000 ರೂ. ನಂತೆ) ಮೊತ್ತವನ್ನು ಕಂಪನಿಗಳು ರೈತರ ಷೇರು ಮೊತ್ತವೆಂದು ಪರಿಗಣಿಸಬೇಕು.
ಈ ಎರಡು ಪರಿಹಾರಗಳನ್ನು ತಾವು ಒಪ್ಪಿದಲ್ಲಿ ರೈತರಿಗೂ ಮತ್ತು ಕಂಪನಿಗೂ ಹಾಗು ಸರಕಾರಕ್ಕೂ ಯಾವುದೆ ಧಕ್ಕೆ ಇಲ್ಲವಾಗಿದೆ ಈ ಕುರಿತಂತೆ ಸೂಕ್ತವಾಗಿ ಚರ್ಚಿಸಲು ಭೂ ಸಂತ್ರಸ್ಥರ ಹೋರಾಟ ಸಮಿತಿ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿ ಪರಿಹರಿಸಲು ಯು. ಬಸವರಾಜ ಕೋರಿದ್ದಾರೆ.