ಕ್ರೀಡೆಗಳಿಂದ ಆರೋಗ್ಯ ವೃದ್ದಿ : ರಾಠೋಡ
ಭಾಲ್ಕಿ: ಸೆ.೧೩:ಕ್ರೀಡೆಗಳಿಂದ ಆರೋಗ್ಯ ಸುಧಾರಿಸಿ, ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೊಂದುವರು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರೋಗಿದಾಸ ರಾಠೋಡ ಅಭಿಪ್ರಾಯಪಟ್ಟರು.
ಪಟ್ಟಣದ ಹುಮನಾಬಾದ ರಸ್ತೆ ಹತ್ತಿರದ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಕಾಲೇಜು ಆವರಣದಲ್ಲಿ ನಡೆದ ಪ್ರಸ್ತುತ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬರೀ ಓದಿಗಷ್ಟೇ ಸೀಮಿತವಾಗದೇ, ಕ್ರೀಡೆಗಳಲ್ಲಿಯೂ ಭಾಗವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶೈಕ್ಷಣಿಕ ಅವಧಿಗಳಲ್ಲಿ ಕ್ರೀಡೆಗೂ ಸಮಯ ನೀಡಲಾಗಿದೆ ಎಂದು ಹೇಳಿದರು.
ಕನ್ನಡ ಭಾಗ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಹುಲ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿದರು. ರಾಜೀವಗಾಂಧಿ ಸ್ಮಾರಕ ಪ್ರೌಢಶಾಲೆಯ ಮುಖ್ಯಶಿಕ್ಷಕ ಅನೀಲಕುಮಾರ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಯೋಜಕ ಸಹದೇವ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾರದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ವಸಂತ ಪಾಟೀಲ, ಸಿಆರ್‌ಪಿ ಅಂಬ್ರೀಶ ಖಂಡ್ರೆ, ದೈಹಿಕ ಶಿಕ್ಷಕ ಚನ್ನವೀರ ಚಕ್ರಸಾಲಿ, ಮೈತ್ರಾದೇವಿ ಚಂದ್ರಕಾAತ ಬಿರಾದಾರ ಉಪಸ್ಥಿತರಿದ್ದರು. ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಪ್ರಾಂಶುಪಾಲ ಜಾಲಿಂದರ ಜಗನ್ನಾಥ ಮೇತ್ರೆ ಸ್ವಾಗತಿಸಿದರು. ವಿಠಲರಾವ ಬಿರಾದಾರ ನಿರೂಪಿಸಿದರು. ಪ್ರತಾಪ ಕೋಣೆ ವಂದಿಸಿದರು.