ಗ್ರಾಮೀಣ ಭಾಗದಲ್ಲಿ ವಿದ್ಯಾದಾನ ಶ್ರೇಷ್ಠವಾದದ್ದು
ಭಾಲ್ಕಿ:ಸೆ.೧೩: ಗಡಿ ಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರು ಶೈಕ್ಷಣಿಕ ಕೇಂದ್ರ ತೆರೆದು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾದಾನಗೈಯುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಡಾ.ಹಂಸಾ ಡಾ.ಗಿರೀಶ ಬದೋಲೆ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್, ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ ಮತ್ತು ಇಂಡಿಯಾ ೪ ಐಎಎಸ್ ಅಕಾಡೆಮಿ ಬೆಂಗಳೂರು ಮತ್ತು ಎಂವೈಪಿಎಲ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ, ಸಿಎ ಫೌಂಡೇಶನ್ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠವಾದದ್ದು ಅಂತಹ ವಿದ್ಯಾದಾನವನ್ನು ಪೂಜ್ಯರು ಈ ಭಾಗದ ಮಕ್ಕಳಿಗೆ ಕಲ್ಪಿಸಿ ನಾಡಿಗೆ ಉತ್ತಮ ಸಂಪತ್ತು ಒದಗಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು, ದೆಹಲಿ, ಹೈದರಾಬಾದ್ ನಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ಸ್ಪರ್ಧಾತ್ಮಕ ತರಬೇತಿ ಇದೀಗ ಚನ್ನಬಸವೇಶ್ವರ ಗುರುಕುಲದಲ್ಲಿ ಆರಂಭಿಸಿರುವುದು ಸಂತಸದ ಸಂಗತಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ಇಂಡಿಯಾ ೪ ಐಎಎಸ್ ಅಕಾಡೆಮಿ ಸಿಇಒ ಶ್ರೀನಿವಾಸ ಪಿ.ಸಿ ಮಾತನಾಡಿ, ಸರಕಾರದ ಎಲ್ಲ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭ್ಯಾಸದ ಜತೆಗೆ ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಇಂಡಿಯಾ ೪ ಐಎಎಸ್ ಅಕಾಡೆಮಿ ನಿರ್ದೇಶಕ ಅಭಿಷೇಕ ಜೋಗಣ್ಣ, ಎಂವೈಪಿಎಎಲ್ ವ್ಯವಸ್ಥಾಪಕ ಮಯೂರ ಮುನ್ನಳಿಮಠ ವಿಶೇಷ ಉಪನ್ಯಾಸ ನೀಡಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಗುರುಕುಲದ ಹಳೆಯ ವಿದ್ಯಾರ್ಥಿ ಅಕ್ಷಯ ಮುನ್ನೂಳ್ಳಿ, ಮಹಾಲಿಂಗ ಖಂಡ್ರೆ, ಪತ್ರಕರ್ತ ಬಸವರಾಜ ಪ್ರಭಾ, ಪಾಲಕರ ಪ್ರತಿನಿಧಿ ಅಶ್ವಿನಿ ಕನಶೆಟ್ಟೆ ಸೇರಿದಂತೆ ಹಲವರು ಇದ್ದರು. ಡಾ.ಕಿರಣ ಸಜ್ಜನಶೆಟ್ಟಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ಸುಧಾಕರ ಬಿರಾದಾರ್ ವಂದಿಸಿದರು.