ಕಾಂಗ್ರೆಸ್ ಗೋಸುಂಬೆ ಆಟವನ್ನು ದಲಿತರು ಅರ್ಥ ಮಾಡಿಕೊಳ್ಳಲಿ : ಎನ್. ಮಹೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.13-ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಎನ್. ಮಹೇಶ್ ಖಂಡಿಸಿದ್ದಾರೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ಮೀಸಲಾತಿ ಹಾಗೂ ಸಂವಿಧಾನ ವಿರೋಧಿಗಳು ಕಾಂಗ್ರೆಸ್‍ನವರು ಎಂಬುವುದು ಅಮೇರಿಕಾದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯಿಂದ ಸಾಬೀತಾಗಿದೆ. ರಾಹುಲ್ ಗಾಂಧಿ ಅವರ ತಾತ ಜವಾಹಲ್ ನೆಹರು ಸಹ ಇದೇ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಹಾಗೂ ನೆಹರು ಕುಟುಂಬ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿದ್ದು, ಮೀಸಲಾತಿ ನೀಡುತ್ತಿರುವುದು ಕಾಂಗ್ರೆಸ್‍ಗೆ ಇಷ್ಟವಿಲ್ಲ ಎಂದು ದೂರಿದರು.
ಅಮೇರಿಕಾ ಪ್ರವಾಸಲ್ಲಿರುವ ರಾಹುಲ್‍ಗಾಂಧಿ ಅವರು ಜಾರ್ಜ್‍ಟೌನ್ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಸಂವಾದದಲ್ಲಿ ಭಾರತದಲ್ಲಿರುವ ಮೀಸಲಾತಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷವೇ ಮೀಸಲಾತಿಯನ್ನು ತೆಗೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ. ಇಂಥ ನಾಯಕರು ಹಾಗು ಪಕ್ಷÀ ನಾವು ಮೀಸಲಾತಿ ಪರ ಹಾಗೂ ಸಂವಿಧಾನ ರಕ್ಷಕರು ಎಂದು ಹೇಳಿಕೊಂಡು ಆ ವರ್ಗಗಳ ಮತಗಳನ್ನು ಪಡೆದು ಅನ್ಯಾಯ ಮಾಡುತ್ತಾಲೇ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗು ನಂತರವು ಸಹ ಮೀಸಲಾತಿ ವಿರುದ್ದವಾಗಿತ್ತು. ಮಹಾತ್ಮ ಗಾಂಧೀಜಿ ಹಾಗೂ ಜವಾಹಲ್ ನೆಹರು ಅವರು ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದರು. ಅಂಬೇಡ್ಕರ್ ಅವರ ಆಶಯದ ವಿರುದ್ದವಾಗಿದ್ದವರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ ಕಮೀಷನ್ ಆಯೋಗವನ್ನು ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ದ ಅಂದು ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅಸಮಾಧಾನಿತರಾಗಿ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು ಎಂದರು.
ಅಲ್ಲಿಂದಲು ಸಹ ಕಾಂಗ್ರೆಸ್ ಪಕ್ಷ ಮೀಸಲಾತಿ ವಿರುದ್ದದ ನಿಲುವು ಹೊಂದಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮ ಸಮುದಾಯದ ಬಂಧುಗಳು ಹಾಗು ಓಬಿಸಿ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮೋಸ ಹೋಗುತ್ತಿದೆ. ಈ ಪಕ್ಷದಲ್ಲಿದ್ದು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ನಮ್ಮ ಎಚ್.ಸಿ. ಮಹದೇವಪ್ಪ ಅವರು ಏನು ಹೇಳುತ್ತಾರೆ. ಅವರದೇ ಪಕ್ಷದ ನಾಯಕರು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೋಟ್ಯಾಂತರ ರೂ. ವೆಚ್ಚ ಮಾಡಿ, ಅಂತರರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ಉಳಿಸುವ ಹಾಗೂ ಸಂವಿಧಾನ ಉಳಿಸುವ ಅಭಿಯಾನ ಮಾಡುತ್ತಿದ್ದಾರೆ. ಈ ಬಗ್ಗೆ ಆ ಪಕ್ಷದ ನಾಯಕರು ಏಕೆ ಮಾತನಾಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಗೋಸುಂಬೆ ಬಣ್ಣ ಬಯಲಾಗಿದೆ ಎಂದು ಎನ್. ಮಹೇಶ್ ಟೀಕಿಸಿದರು.
ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳು ಹಾಗೂ ಅದು ಹೊಂದಿರುವ ಶಕ್ತಿಯಿಂದ ರಾಹುಲ್ ಗಾಂಧಿ ಅಲ್ಲ ಅವರ ತಾತ ಜವಾಹಲ್ ನೆಹರು ಬಂದರು ಸಹ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಇದನ್ನು ಸಂಸತ್‍ನಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರದರ್ಶನ ಮಾಡುವ ರಾಹುಲ್ ಗಾಂಧಿ ಅರ್ಥವಾಗುತ್ತಿಲ್ಲ. ಸಂವಿಧಾವನ್ನು ಓದಿ ಆರ್ಥೈಯಿಸಿಕೊಂಡಿದ್ದರೆ ಗೊತ್ತಾಗುತ್ತಿತ್ತು. ಕೇವಲ ಅಂಬೇಡ್ಕರ್ ಬರೆದ ಪುಸ್ತಕ ಹಿಡಿದುಕೊಂಡರೆ ಜ್ಞಾನಿಯಾಗುವುದಿಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ 60 ವರ್ಷಗಳ ಆಡಳಿತದಲ್ಲಿ ತೆಗೆದುಕೊಂಡು ಬಹಳಷ್ಟು ನಿರ್ಣಯಗಳು ಸಂವಿಧಾನದ ವಿರುದ್ದವಾಗಿದೆ. ಇಂಥ ಪಕ್ಷವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರು ಬೆಂಬಲಿಸಬೇಕಾ. ಹೀಗಾಗಿ ರಾಹುಲ್‍ಗಾಂಧಿ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬುಲೆಟ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಮಾಂಬಳ್ಳಿ ರಾಮಣ್ಣ, ಅಗರರಾಜು, ಸಹ ವಕ್ತಾರ ಮಂಜುನಾಥ್ ಇದ್ದರು.