ಕರಿನಂಜನಪುರ ಹೊಸ ಬಡಾವಣೆಯ ರಸ್ತೆ ದುರಸ್ತಿ ಪಡಿಸಿಕೊಳ್ಳುತ್ತಿರುವ ನಿವಾಸಿಗಳು!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.13– ಕರಿನಂಜನಪುರ ಹೊಸ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರು ಕಾಣದೇ ತೀವ್ರ ಹಳ್ಳಕೊಳ್ಳದಿಂದ ಕೊಡಿದ್ದು, ನಿವಾಸಿಗಳೇ ಗುತ್ತಿಗೆದಾರರೊಬ್ಬರ ಸಹಕಾರರಿಂದ ಮಣ್ಣು ಹಾಗೂ ಗ್ರಾವಲ್ ಸುರಿದು ಸಮತಟ್ಟು ಮಾಡಿಕೊಂಡಿರುತ್ತಾರೆ.
ನಗರದ ನಗರಸಭೆಯ 10ನೇ ವಾರ್ಡಿಗೆ ಸೇರಿದ ಕರಿನಂಜನಪುರದಿಂದ ರಾಮಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ಕರಿನಂಜನಪುರ ಹೊಸ ಬಡಾವಣೆ ಹಾಗೂ ರಾಮಸಮುದ್ರ ಹೊಸ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಹ. ಈಗಾಗಲೇ ಈ ರಸ್ತೆಯನ್ನು ಅಭಿವೃದ್ದಿಪಡಿಸಲು ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಯಾಗಿತ್ತು.
ಟೆಂಡರ್ ಪಡೆದುಕೊಂಡ ಗುತ್ತಿಗೆದಾರರು ರಾಮಸಮುದ್ರದಿಂದ ರಸ್ತೆ ನಿರ್ಮಾಣ ಮಾಡಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲಿಂದ ಮುಂದಕ್ಕೆ ಕರಿನಂಜನಪುರಕ್ಕೆ ಸಂಪರ್ಕ ನೀಡುವ ರಸ್ತೆಯನ್ನು ಅಭಿವೃದ್ದಿ ಪಡಿಸಲು ಹೆಚ್ಚುವರಿ ಅನುದಾನಬೇಕೆಂದು ಕಾಮಗಾರಿ ನಿಲ್ಲಿಸಲಾಗಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿರುವ ಜಮೀನುಗಳು ನಿವೇಶನಗಳನ್ನಾಗಿ ಪರಿವರ್ತನೆಯಾಗಿದ್ದು, ನಗರಸಭೆ ವ್ಯಾಪ್ತಿಗೆ ಸೇರಿಕೊಂಡಿವೆ. ಇಲ್ಲಿ ನಿವೇಶನ ಪಡೆದು ಮನೆ ಕಟ್ಟಿಕೊಂಡಿರುವ ನಿವಾಸಿಗಳು ಪಾಡು ಹೇಳತೀರದು.
ಮಳೆ ಬಂದರೆ ಸಂಪೂರ್ಣ ಕೇಸರು ಮಯವಾಗುವ ರಸ್ತೆಗಳು. ಗುಂಡಿ, ಹಳ್ಳಗೊಳ್ಳ ನಿರ್ಮಾಣವಾಗಿ ವಾಹನ ಸವಾರರು ಬಹಳ ತ್ರಾಸದಿಂದ ಮನೆ ಸೇರಬೇಕಾಗುತ್ತದೆ. ಇನ್ನು ಕಾರು, ಜೀಪು ಇತರೇ ವಾಹನಗಳು ಎಲ್ಲಿ ಹಳ್ಳ ಎಲ್ಲಿ ರಸ್ತೆ ಎಂದು ಕಾಣದೆ ನಿಧಾನವಾಗಿ ಚಲಿಸುವ ಂತಾಗುತ್ತದೆ. ಬಿಸಿಲು ಇದ್ದಾಗ ರಸ್ತೆ ತುಂಬ ಧೂಳು ಮಾಯವಾಗುತ್ತದೆ.
ಇದನ್ನು ನೋಡಿಯು ಸವಾರರ ಕಷ್ಟವನ್ನು ಅರಿತ ಗುತ್ತಿಗೆದಾರರು ಹಾಗೂ ಈ ಬಡಾವಣೆಯ ನಿವಾಸಿಯಾಗಿರುವ ಯಣಗುಂಬ ರಾಜೇಂದ್ರಪ್ರಸಾದ್ ಅವರು ತಮ್ಮದೇ ಟ್ಯಾಕ್ಟರ್‍ರಲ್ಲಿ ಮಣ್ಣು, ಕಲ್ಲು ಹಾಗೂ ಗ್ರಾವಲ್ ತಂದು ಹಾಕಿ ಹಳ್ಳಗಳನ್ನು ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನಾದರು ಸಂಬಂಧಪಟ್ಟ ನಗರಸಭೆ ಅಡಳಿತ ಹಾಗೂ ಅಧಿಕಾರಿಗಳು ಈ ರಸ್ತೆಯನ್ನು ಅಭಿವೃದ್ದಿಪಡಿಸುವ ಮೂಲಕ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.