ಪ್ರತಿ ವರ್ಷ ೮ ಲಕ್ಷ ಮಂದಿ ಆತ್ಮಹತ್ಯೆ
ಕೋಲಾರ,ಸೆ,೧೩- ಸಂವಿಧಾನದಡಿ ರಾಜಕೀಯ,ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸುವ ಉದ್ದೇಶದೊಂದಿಗೆ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದ್ದು, ಇದನ್ನು ಮೀರಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಮತ್ತು ಸಮಸ್ಯೆಗಳಿಗೆ ಅದು ಪರಿಹಾರವೂ ಅಲ್ಲ ಮತ್ತು ಪ್ರಪಂಚದಲ್ಲಿ ಪ್ರತಿ ವರ್ಷ ೮ ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ತಿಳಿಸಿದರು.
ಜಿಲ್ಲಾಡಳಿತ,ಜಿಪಂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪ್ರಪಂಚದಾದ್ಯಂತ ಪ್ರತಿವರ್ಷ ೮ ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಭಾರತದಲ್ಲಿ ಪ್ರತಿ ವರ್ಷ ೧ ರಿಂದ ೨ ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಡೆಯಲು ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಇತ್ತೀಚಿನ ಸಮೀಕ್ಷೆ ಪ್ರಕಾರ ೧೫ ರಿಂದ ೨೪ ವರ್ಷದೊಳಗಿನ ಯುವಕರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಈ ಕುರಿತು ಅರಿವು ನೀಡುವುದರ ಜತೆಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಪೋಷಕರ ಅತಿಯಾದ ನಿರೀಕ್ಷೆ, ನಿರುದ್ಯೋಗ, ಪ್ರೀತಿ,ಪ್ರೇಮ ವೈಪಲ್ಯ ಪಾಲಕರ ವಿರೋಧ ಮತ್ತಿತರ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಮದುವೆ ಆಗುವುದು, ಸಂಸಾರದ ಒತ್ತಡ, ಮದ್ಯಪಾನ, ಮಾಧಕ ವಸ್ತುಗಳ ವ್ಯಸನ, ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವರ್ಷದ ಘೋಷಣೆ ‘ಕ್ರಿಯೆಗಲ ಮೂಲಕ ಭರವಸೆಯನ್ನು ಸೃಷ್ಟಿಸುವುದು’ಆಗಿದೆ ಎಂದ ಅವರು, ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಆಪ್ತ ಸಮಾಲೋಚನೆಗೆ ಒಳಗಾಗಿ ಎಂದು ಕಿವಿಮಾತು ಹೇಳಿದರು.
ಕಲಿಕೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪಾಲ್ಗೊಂಡು ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಿ ಮಾನಸಿಕ ಆರೋಗ್ಯವಿದ್ದರೆ ಆತ್ಮಹತ್ಯೆ ವಿಚಾರಗಳು ತಲೆಗೆ ಬರುವುದಿಲ್ಲ ಎಂದು ತಿಳಿಸಿ,ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಣಿ ೧೪೪೧೬ಕ್ಕೆ ಕರೆ ಮಾಡಿ ಆಪ್ತಸಮಾಲೋಚನೆಗೆ ಒಳಗಾಗಿ ಎಂದರು.
ಕಾರ್ಯಕ್ರಮದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇಧ, ಪೋಕ್ಸೋ ಕಾಯಿದೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ತಿಳಿಸಿಕೊಡಲಾಯಿತು. ಜತೆಗೆ ಕಾನೂನು ಪ್ರಾಧಿಕಾರದ ಸಹಾಯವಾಣಿ ೧೫೧೦೦ ಬಳಸಿಕೊಳ್ಳಲು ಕೋರಲಾಯಿತು.
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ ಬದುಕಿ ಸಾಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ ವಹಿಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ೪೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.