ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಡಾ, ಜಗದೀಶ್ ನೇಮಕಕ್ಕೆ ವಿರೋಧ
ಕೋಲಾರ,ಸೆ.೧೩- ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಆಗಿದ್ದ ಜಗದೀಶ್ ಈಗ ಹಿಂಬಾಗಿಲಿನಿಂದ ಕೋಲಾರ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಹುದ್ದೆಗೆ ಲಾಭಿ ಮಾಡುತ್ತಿದ್ದು, ಇವರ ಮೇಲೆ ಈಗಾಗಲೇ ಸಾಕಷ್ಟು ಭ್ರಷ್ಟಾಚಾರದ ಹಗರಣ ಇರುವ ಹಿನ್ನಲೆ ಇವರನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ನೇಮಕ ಮಾಡಬಾರದೆಂದು ಕರವೇ ಸಮರಸೇನೆ ರಾಜ್ಯಾಧ್ಯಕ್ಷ ಸೋಮಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸೋಮಣ್ಣ, ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ಆಗಿದ್ದ ಜಗದೀಶ್ ಸೇವಾ ಅರ್ಹತೆ ಇಲ್ಲದಿದ್ದರೂ ಹಣ ಹಾಗೂ ಜಾತಿ ವ್ಯಾಮೋಹದಿಂದ ಹಲವರ ಬೆನ್ನು ಬಿದ್ದು ಜಿಲ್ಲಾ ಆರೋಗ್ಯಾಧಿಕಾರಿ ಆಗಿ ಭ್ರಷ್ಟಾಚಾರ ನಡೆಸಿದ್ದರು. ಈ ಬಗ್ಗೆ ಜಗದೀಶ್ ಮೇಲೆ ಸಾಕಷ್ಟು ದೂರುಗಳನ್ನು ನೀಡಿದ್ದು, ಲೋಕಾಯುಕ್ತದಲ್ಲೂ ಸಹ ಸಾಕಷ್ಟು ದೂರುಗಳಿವೆ. ಇವರ ಮೇಲಿನ ದೂರುಗಳ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಾನದಿಂದ ಜಗದೀಶ್‌ರನ್ನು ವರ್ಗಾಯಿಸಿದ ನಂತರ ಈಗ ಪುನಃ ಕೋಲಾರದಲ್ಲೇ ಠಿಕಾಣಿ ಹೂಡುವ ಉದ್ದೇಶದಿಂದ ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಲಾಭಿ ನಡೆಸುತ್ತಿದ್ದಾರೆಂದು ಸೋಮಣ್ಣ ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಅದರಲ್ಲೂ ಆಡಳಿತಾತ್ಮಕ ಹುದ್ದೆಗಳಲ್ಲಿ ಲಾಭಿ ಮಾಡಿಕೊಂಡು ಸುಮಾರು ೨೦ ವರ್ಷಗಳಿಂದ ಜಿಲ್ಲೆಯಲ್ಲೇ ಜಂಡಾ ಹಾಕಿರುವ ಡಾ.ಜಗದೀಶ್ ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರ ಇಲಾಖೆಯನ್ನಾಗಿ ಪರಿವರ್ತಿಸಿ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಾರೆ. ಇಂತಹ ವ್ಯಕ್ತಿ ಪುನಃ ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ನೇಮಕ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲಿಯೂ ಸಹ ರೋಗಿಗಳಿಗೆ ಚಿಕಿತ್ಸೆ ನೀಡಿಲ್ಲ. ಇಲ್ಲಿಯವರೆಗೂ ಒಂದೂ ಪಾಯಿಸನ್ ಕೇಸ್ ಚಿಕಿತ್ಸೆ ಮಾಡಿಲ್ಲ. ಇಲ್ಲಿಯವರೆಗೂ ವಿಧಿ ವಿಜ್ಞಾಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿಲ್ಲ. ಪೋಕ್ಸೋ ಕೇಸ್‌ನಲ್ಲೂ ಚಿಕಿತ್ಸೆ ನೀಡಿಲ್ಲ. ಯಾವುದೇ ಪ್ರಾಥಮಿಕ ಕೇಂದ್ರಗಳಲ್ಲಿ ಗರ್ಭೀಣಿಯರಿಗೆ ಚಿಕಿತ್ಸೆ ನೀಡಿಲ್ಲ ಕೇವಲ ಆಡಳಿತಾತ್ಮಕ ಹುದ್ದೆಗಳಲ್ಲಿ ೨೦ ವರ್ಷಗಳಿಂದ ಠಿಕಾಣಿ ಹೂಡಿದ್ದು, ಇವರ ಪತ್ನಿ ಡಾ.ಸುಧಾಮಣಿ ಸಹ ೧೫ ವರ್ಷದಿಂದ ಆಡಳಿತಾತ್ಮಕ ಹುದ್ದೆಗಳಲ್ಲಿಯೇ ಇದ್ದು ಇಬ್ಬರು ಸಹ ಜಿಲ್ಲಾಸ್ಪತ್ರೆ ಆವರಣದ ಸುತ್ತಮುತ್ತಲೇ ಕರ್ತವ್ಯ ನಿರ್ವಹಿಸುವ ಮೂಲಕ ಆಡಳಿತಾತ್ಮಕದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಇಷ್ಟೆಲ್ಲಾ ಅಕ್ರಮಗಳು ನಡೆಸಿದ ಹಿನ್ನಲೆಯಲ್ಲಿ ಇವರನ್ನು ಆರೋಗ್ಯಾಧಿಕಾರ ಹುದ್ದೆಯಿಂದ ವರ್ಗಾಯಿಸಲಾಯಿತು. ಆದರೆ ಈಗ ಪುನಃ ಕೋಲಾರದಲ್ಲಿ ಇಲಾಖೆಯಲ್ಲಿ ನುಂಗಿದ ಹಣದ ರುಚಿಯನ್ನು ಕಂಡಿದ್ದು ಪುನಃ ಮುಂದುವರೆಸಲು ಈಗ ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಬರಲು ಮುಂದಾಗಿದ್ದಾರೆ.
ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಇಂಥ ಭ್ರಷ್ಟರನ್ನು ಜಿಲ್ಲೆಗೆ ಪುನಃ ನೇಮಕ ಮಾಡಿದಲ್ಲಿ ಇವರ ವಿರುದ್ದ ಹಾಗೂ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.