ನೆಲ್ಯಾಡಿಯಲ್ಲಿ ವರುಣತಾಂಡವ ; ೪ ಮನೆ, ೨ ವಿದ್ಯುತ್ ಕಂಬಗಳಿಗೆ ಹಾನಿ
ಉಪ್ಪಿನಂಗಡಿ: ಕರಾವಳಿ ಭಾಗದಲ್ಲಿ ಮಳೆಗಾಲ ಜೂನ್ ತಿಂಗಳಿನಿಂದಲೇ ಆರಂಭವಾಗಿದೆ. ಆದರೆ ಮಳೆ ಮಾತ್ರ ಬೇಕೋ ಬೇಡವೋ ಎಂಬಂತೆ ಬರುತ್ತಿದೆ. ಇತ್ತ ಬಿಸಿಲಿದ್ದು, ಅತ್ತ ಕಣ್ಣು ಹಾಯಿಸುವಾಗ ಮಳೆ ಬರುತ್ತದೆ. ಯಾವ ಸಮಯದಲ್ಲಿ ಏನಾಗುವುದು ಎಂದು ಊಹಿಸಲೂ ಅಸಾದ್ಯ. ನಿನ್ನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಜನತಾ ಕಾಲನಿ ಪರಿಸರದಲ್ಲಿ ಬೀಸಿದ ಭಾರೀ ಮಳೆಗೆ ೪ ಮನೆಗಳ ಛಾವಣಿ ಹಾನಿಗೀಡಾಗಿ ೨ ವಿದ್ಯುತ್ ಕಂಬಗಳು ಮುರಿದಿದೆ.
ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಬಳಿ ಇರುವ ಕಾಲನಿಯ ನಿವಾಸಿಗರಾದ ಐತ್ತಪ್ಪ, ಐಸುಬು, ಬಾಬು ಆಚಾರಿ, ಲೋಕೇಶ್ ಅವರ ಮನೆಯ ಮೇಲ್ಛಾವಣಿಯು ಗಾಳಿಯ ವೇಗಕ್ಕೆ ಸಿಲುಕಿ ಹಾನಗೀಡಾಗಿದ್ದು, ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮುರಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ , ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.