ಯುಬಿಡಿಟಿ ಕಾಲೇಜಿನಲ್ಲಿ 50% ಪೇಮೆಂಟ್ ಕೋಟಾ ರದ್ದುಪಡಿಸಲು ಉನ್ನತ ಶಿಕ್ಷಣ ಸಚಿವರಿಗೆ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಅ.೪;  ಕರ್ನಾಟಕದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಾದ ದಾವಣಗೆರೆಯ  ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 50% ಪೇಮೆಂಟ್ ಕೋಟಾ ಜಾರಿಗೊಳಿಸಲಾಗಿದೆ. ಇದನ್ನು ವಿರೋಧಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಇಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ಅವರನ್ನು ಭೇಟಿ ಮಾಡಿ ಕೂಡಲೇ ಯುಬಿಡಿಟಿ ಕಾಲೇಜಿನ 50% ಪೇಮೆಂಟ್ ಕೋಟಾ ರದ್ದುಗೊಳಿಸಬೇಕೆಂದು ಆಗ್ರಹಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಈ ಕುರಿತು ಗಮನ ಹರಿಸುವುದಾಗಿ ತಿಳಿಸಿದರು. ಈ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ಬ್ಯಾಚಿನ ಒಟ್ಟು 504 ಸೀಟುಗಳಲ್ಲಿ 254 ಸೀಟುಗಳನ್ನು 97ಸಾವಿರ ರೂಗೆ ಮಾರಲಾಗುತ್ತಿದೆ.  ಉಳಿದ 250 ಸೀಟುಗಳಿಗೆ ಪಡೆಯಲಾಗುತ್ತಿರುವ 43 ಸಾವಿರ ರೂ ಶುಲ್ಕವೇ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ದುಬಾರಿ ಶುಲ್ಕದಿಂದ ರಾಜ್ಯದಲ್ಲಿ ಈಗಾಗಲೇ ಇಂಜಿನಿಯರಿಂಗ್ ಪ್ರವೇಶಾತಿ ಕುಸಿಯುತ್ತಿದೆ. ಹೀಗಿರುವಾಗ, ಜನರ ತೆರಿಗೆ ಮೇಲೆ ಕಟ್ಟಿರುವ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಕಿತ್ತು ಹಣವಂತರಿಗೆ ಮಾರುತ್ತಿರುವುದು ಸರ್ಕಾರದ ಕಡು ಬಡಜನ ವಿರೋಧಿ ನೀತಿಯಾಗಿದೆ.ಸರ್ಕಾರವು ತನ್ನ ವ್ಯಾಪಾರಿ ಧೋರಣೆಯನ್ನು ಕೈಬಿಟ್ಟು ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸದಿದ್ದಲ್ಲಿ ಸರ್ಕಾರದ ವಿರುದ್ಧ ಜನ ಹೋರಾಟ ಬೆಳೆಸುವುದಾಗಿ ಸಚಿವರಿಗೆ ಎಚ್ಚರಿಕೆ ನೀಡಲಾಯಿತು. ಎಐಡಿಎಸ್‌ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ನೇತೃತ್ವದ ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪೂಜಾ ನಂದಿಹಳ್ಳಿ, ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಮುಖಂಡರಾದ ಸುಮನ್ ಟಿ ಎಸ್, ಅಖಿಲೇಶ, ಅಭಿಷೇಕ, ಆದರ್ಶ, ಸಂತೋಷ್, ಚೇತನ್, ರೋಹಿತ್ ಮುಂತಾದವರು ಉಪಸ್ಥಿತರಿದ್ದರು.