ಕೊಡೆ ಮಾಡಿದ ಅನಾಹುತ: ಗಾಯಾಳು ಉಪನ್ಯಾಸಕಿ ಮೃತ್ಯು
ಪುತ್ತೂರು: ಕೆಲವು ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಕೆಯ್ಯೂರು ಕೆಪಿಎಸ್ ಪದವಿ ಪೂರ್ವ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿದ್ದ ಸುನಂದ ಅಚ್ಯುತ ಪೂಜಾರಿಯವರು ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ಸಂಬಂಧಿಕರೋರ್ವರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದಾಗ ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕ್‌ನಿಂದ ಜಾರಿ ರಸ್ತೆಗೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.
ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರ ಪತಿ ಡಾ. ಅಚ್ಯುತ ಪೂಜಾರಿ ಅವರು ಬಂಟ್ವಾಳ ಕಾಮಾಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.