ಕನ್ನಡ ಸಾಹಿತ್ಯಕ್ಕೆ ಡಾ.ಹಾ.ಮಾ.ನಾಯಕರ ಕೊಡುಗೆ ಅನನ್ಯ
ಕಲಬುರಗಿ:ಸೆ.12:ಹಾಮಾನಾ ಎಂದೇ ಪ್ರಸಿದ್ಧರಾಗಿರುವ ಡಾ.ಹಾ.ಮಾ.ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಗೋವಾ ಹೋಟೆಲ್ ಹತ್ತಿರವಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಡಾ.ಹಾಮಾ.ನಾಯಕ್‍ರ 93ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕನ್ನಡದಲ್ಲಿ ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರು ಪ್ರಮುಖರಾಗಿದ್ದಾರೆ. ಕನ್ನಡ ಕಟ್ಟುವ ಕೆಲಸವನ್ನು ಮಾಡಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ನಮ್ಮ ಜಿಲ್ಲೆಗೆ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಡಾ.ಸಂದೀಪ ಪ್ರಭು, ಲಿಲೋಫಲ್ ಶೇಖ್, ಶೀತಲ್ ಸಿಂಧೆ, ಅರುಣಕುಮಾರ ಅಷ್ಟಗಿ, ರೋಹಿತ್ ಪಟ್ಟಣ, ರಾಹುಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.