ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಕೊಡುಗೆ ಅಪಾರ
ಕಲಬುರಗಿ:ಸೆ.12:ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹವನ್ನು ಲಿಂ. ಪೂಜ್ಯ ದೊಡ್ಡಪ್ಪ ಅಪ್ಪ ಅವರು ನೀಡಿ ಈ ಭಾಗ ಶೈಕ್ಷಣಿಕವಾಗಿ ಬೆಳೆಯಲು ಕಾರಣಕೃರ್ತರಾಗಿದ್ದಾರೆ ಎಂದು ಶರಣಬಸವ ವಿಶ್ವವಿದ್ಯಾಲಯದ ವಿಜ್ಯೂವಲ್ ಆರ್ಟ್‍ನ ಹಾನರರಿ ಡೀನ್ ಡಾ.ಶಾಂತಲಾ ಎಸ್.ನಿಷ್ಠಿ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಪೂಜ್ಯ ದೊಡ್ಡಪ್ಪ ಅಪ್ಪ ಅವರ 41ನೆ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನ್ನ ದಾಸೋಹ ಜೊತೆಗೆ ಜ್ಞಾನ ದಾಸೋಹ ನೀಡಿದರೆ ಈ ಭಾಗ ಎಲ್ಲ ರೀತಿಯಿಂದಲೂ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮನಗಂಡು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ಟಾಂಗಾ-ಡಮಣಿಗಳನ್ನು ಕಳುಹಿಸಿ ವಿದ್ಯಾರ್ಥಿನಿಯರನ್ನು ಕರೆತರುವ ವ್ಯವಸ್ಥೆ ಮಾಡಿ ಅವರಿಗೆಲ್ಲ ಉಚಿತ ಶಿಕ್ಷಣ ನೀಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು. ತ್ರ್ರಿವಿಧ ದಾಸೋಹ ಮೂರ್ತಿಗಳೆನಿಸಿದ್ದ ಅಪ್ಪ ಅವರು ಎಲ್ಲರನ್ನು ಆತ್ಮೀಯವಾಗಿ ಕಾಣುತ್ತಿದ್ದರು. ಸರಳ ವ್ಯಕ್ತಿತ್ವದ ಜೀವನ ನಡೆಸಿದ ಪೂಜ್ಯರು ತಮ್ಮಲ್ಲಿ ಬಂದವರ ಕಷ್ಟಗಳನ್ನ ಪರಿಹರಿಸುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಿಎ ಫೌಂಡೇಶನ್ ಮತ್ತು ಕೋಚಿಂಗ್‍ನ ನಿರ್ದೇಶಕರಾದ ಡಾ.ಇಂದಿರಾ ಶೇಟಕಾರ ಮಾತನಾಡಿ, ಅಂದು ಪೂಜ್ಯ ದೊಡ್ಡಪ್ಪ ಅಪ್ಪ ಅವರು ಬಿತ್ತಿದ್ದ ಶಿಕ್ಷಣದ ಗಿಡ ಇಂದು ಹೆಮ್ಮರವಾಗಿ ಬೆಳೆಸಿದವರು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು. ಅದೇ ರೀತಿಯಾಗಿ ಪೂಜ್ಯ ಡಾ.ದಾಕ್ಷಾಯಣಿ ಅವ್ವ ಸಹ ವಿದ್ಯಾರ್ಥಿಗಳ ಏಳ್ಗೆಗೆ ಬಹಳಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರು ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಲು ಪೂಜ್ಯ ದೊಡ್ಡಪ್ಪ ಅಪ್ಪ ಅವರ ಕಾರ್ಯ ಮಹತ್ವದಾಗಿದೆ. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಸಹ ಅದೇ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಅವರು ಮಾತನಾಡಿ, ಈ ಸಂಸ್ಥೆಯಲ್ಲಿ ಕಲಿತ ಲಕ್ಷ ಲಕ್ಷ ವಿದ್ಯಾರ್ಥಿಗಳು ವಿಶ್ವದಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ. ಅಪ್ಪ ಅವರು ಶಿಕ್ಷಣಕ್ಕೆ ಒತ್ತು ನೀಡದಿದ್ದರೆ ಈ ಭಾಗ ಶೈಕ್ಷಣಿಕವಾಗಿ ಹಿಂದುಳಿಯುತ್ತಿತ್ತು ಎಂದು ಹೇಳಿದರು.
ಮಹಾವಿದ್ಯಾಲಯದ ಕಲಾವಾಣಿ ಸಲಹೆಗಾರರಾದ ಡಾ.ಸೀಮಾ ಪಾಟೀಲ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು, ಪ್ರಾಧ್ಯಾಪಕರಾದ ಶ್ರೀಮತಿ ದಾಕ್ಷಾಯಣಿ ಕಾಡಾದಿ ನಿರೂಪಿಸಿದರೆ, ಪ್ರಸಾದ ಹೆಚ್. ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.