ಈದ್ ಮಿಲಾದ್ ಹಬ್ಬ ಪ್ರಯುಕ್ತನಿಗಮದಿಂದ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ
ಕಲಬುರಗಿ:ಸೆ.12:ಈದ್ ಮಿಲಾದ್ ಹಾಗೂ ವಾರ್ಯಂತದ ದಿನಗಳ ರಜೆ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ಸೆಪ್ಟೆಂಬರ್ 14 ರಂದು ಎರಡನೆಯ ಶನಿವಾರ, ಸೆಪ್ಟೆಂಬರ್ 15 ರಂದು ರಂದು ಭಾನುವಾರ ಹಾಗೂ ಸೆಪ್ಟೆಂಬರ್ 16 ರಂದು ಈದ್-ಮಿಲಾದ್ ಹಬ್ಬ ಪ್ರಯುಕ್ತ ನಿಗಮದಿಂದ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಲಬುರಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್ 12 ಹಾಗೂ 13 ರಂದು ನಿಗಮದ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಇದೇ ಸೆಪ್ಟೆಂಬರ್ 13 ಮತ್ತು 14 ರಂದು ಬೆಂಗಳೂರಿನಿಂದ ಕ.ಕ.ರ.ಸಾ.ನಿಗಮದ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ದೈನಂದಿನ ಕಾರ್ಯಾಚರಣೆಯಲ್ಲಿರುವ 202 ಸಾರಿಗೆಗಳನ್ನು ಹೊರತುಪಡಿಸಿ, 200 ಹೆಚ್ಚುವರಿ ವಾಹನಗಳ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ಹಬ್ಬ ಮುಗಿದ ನಂತರ ಮರಳಿ ಹೋಗುವ ಪ್ರಯಾಣಿಕರಿಗೆ ಇದೇ ಸೆಪ್ಟೆಂಬರ್ 16 ರಿಂದ 19 ರವರೆಗೆ ವರೆಗೆ ಕ.ಕ.ರ.ಸಾ ನಿಗಮದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಈ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿ ಇರುವ 16 ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಆಫ್ ಪಾಯಿಂಟ್‍ನ ಹೆಸರನ್ನು ಗಮನಿಸಬೇಕು.
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದ್ದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.