ಶಾಲಾ ವಾಹನ ಹರಿದು ಬಾಲಕಿ ಸಾವು
ಕಲಬುರಗಿ,ಸೆ.12-ಶಾಲಾ ವಾಹನ ಹರಿದು ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಶಿವಪುರ ಗ್ರಾಮದ ಖುಷಿ ರಾಜಶೇಖರ ಬನ್ನಟ್ಟಿ (4) ಮೃತಪಟ್ಟ ಬಾಲಕಿ.
ಶಾಲಾ ವಾಹನ ಚಾಲಕ ಶ್ರೀಶೈಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲಾ ವಾಹನದಲ್ಲಿ ಬಂದಿಳಿದ ಬಾಲಕಿ ತನ್ನ ತಂದೆಯನ್ನು ಕಂಡು ವಾಹನದ ಹಿಂಬದಿಯಾಗಿ ಓಡಿತ್ತು. ಇದನ್ನು ಗಮನಿಸದ ಚಾಲಕ ಅಷ್ಟರಲ್ಲೇ ವಾಹನವನ್ನು ಹಿಂದಕ್ಕೆ ತಿರುಗಿಸುವಾಗ ಹಿಂಬದಿ ಚಕ್ರದಡಿಗೆ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಚಾಲಕನ ನಿರ್ಲಕ್ಷ್ಯವೇ ಬಾಲಕಿಯ ಸಾವಿಗೆ ಕಾರಣ ಎಂದು ಮೃತ ಬಾಲಕಿಯ ಪೋಷಕರು ಆರೋಪಿಸಿದ್ದು, ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.