ಕಲಿಸಿದ ಗುರುವಿಗೆ ವಿದ್ಯಾರ್ಥಿಗಳಿಂದ ನಿವೇಶನ ಗಿಫ್ಟ್:ಸೆ.15ರಂದು ಗುರುವಂದನಾ ಸಮಾರಂಭ
ಕಲಬುರಗಿ,ಸೆ 12: ಆದರ್ಶ ಶಿಕ್ಷಕ ರಮೇಶ್ ಬಿರಾದಾರ್ ಅವರಿಗೆ ಇದೇ ಸೆ.15ರಂದು ಬೆಳಗ್ಗೆ 10ಕ್ಕೆ ನಗರದ ನೆಹರೂ ಗಂಜ್ ಬಸ್ ನಿಲ್ದಾಣದ ಎದುರಿನ ಲಾಹೋಟಿ ಮಂಗಲ ಕಾರ್ಯಾಲಯದಲ್ಲಿ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಾಲಾ ಕಣ್ಣಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿರಾದಾರ್ ಅವರು ಕಲಬುರಗಿ ನಗರದಲ್ಲಿ ನಂದಿ ಶಿಕ್ಷಣ ಸಂಸ್ಥೆ ಅಡಿ ಬಿರಾದಾರ್ ಟ್ಯುಟೋರಿಯಲ್ಸ್ ನಡೆಸುತ್ತಿದ್ದು, ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಬಿರಾದಾರ್ ಅವರ ಬಳಿ ಕಲಿತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸೇರಿದಂತೆ ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಹಳೆಯ ವಿದ್ಯಾರ್ಥಿಗಳ ಸದಾಶಯದ ಮೇರೆಗೆ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಹೊನ್ನಕಿರಣಗಿಯ ರಾಚೋಟೇಶ್ವರ ಹಿರೇಮಠದ ಚಂದ್ರಗುಂಡ ಶಿವಾಚಾರ್ಯರು, ಮುತ್ತ್ಯಾನ ಬಬಲಾದ ವಿರಕ್ತಮಠದ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಚಿನ್ಮಯಗಿರಿ ಮಹಾಂತೇಶ್ವರ ಸಂಸ್ಥಾನದ ಅಭಿನವ ಮಹಾಂತ ಶಿವಾಚಾರ್ಯರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.ಬಸವರಾಜ ಬಿರಾದಾರ್, ರುದ್ರಮುನಿ ಹಿರೇಮಠ, ರಾಕೇಶ್ ಹಾಗೂ ಶಿವಕುಮಾರ್ ಇದ್ದರು.
ವಿದ್ಯಾರ್ಥಿಗಳಿಂದ ನಿವೇಶನ ಗಿಫ್ಟ್
ಸೆ.15ರಂದು ನಡೆಯಲಿರುವ ಗುರುವಂದನಾ ಸಮಾರಂಭದಲ್ಲಿ ಆದರ್ಶ ಶಿಕ್ಷಕ ರಮೇಶ್ ಬಿರಾದಾರ್ ಅವರಿಗೆ ಹಳೆಯ ವಿದ್ಯಾರ್ಥಿಗಳ ವತಿಯಿಂದ 1200 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಕಾಣಿಕೆಯಾಗಿ ನೀಡಲಾಗುತ್ತಿದೆ ಎಂದು ಸಮಾಜ ಸೇವಕಿ ಮಾಲಾ ಕಣ್ಣಿ ತಿಳಿಸಿದರು.
ದೇಶ-ವಿದೇಶಗಳಲ್ಲಿ ನೆಲೆಸಿರುವ ರಮೇಶ್ ಬಿರಾದಾರ್ ಅವರ 2000ಕ್ಕೂ ಅಧಿಕ ಶಿಷ್ಯಂದಿರು ಸಂಗ್ರಹಿಸಿರುವ ದೇಣಿಗೆ ಹಣದಲ್ಲಿ ಕಲಬುರಗಿ ನಗರದ ರೇವಣಸಿದ್ದೇಶ್ವರ ಬಡಾವಣೆಯಲ್ಲಿಈ ನಿವೇಶನ ಖರೀದಿಸಲಾಗಿದ್ದು, ಗುರುವಂದನಾ ಸಮಾರಂಭದಲ್ಲಿ ನಿವೇಶನದ ದಾಖಲೆ-ಪತ್ರಗಳನ್ನು ರಮೇಶ್ ಬಿರಾದಾರ್ ಅವರಿಗೆ ಹಸ್ತಾಂತರಿಲಾಗುವುದು ಎಂದರು.