ನಾಗಮಂಗಲ ಘಟನೆ ಪೂರ್ವನಿಯೋಜಿತ : ಈಶ್ವರಪ್ಪ
ಹುಬ್ಬಳ್ಳಿ, ಸೆ 12: ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಷ್ಟ್ರದ್ರೋಹಿ ಚಟುವಟಿಕೆಗಳು ನಾಗಮಂಗಲದಲ್ಲಿ ನಡೆದಿದೆ. ಹಿಂದೂಗಳು ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಮುಂದೆ ಡೊಳ್ಳು ಬಾರಿಸಲಾಗಿದೆ ಎಂಬ ಕಾರಣಕ್ಕೆ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಗೂಂಡಾಗಿರಿ ನಡೆಸಲಾಗಿದೆ. ಪೆಟ್ರೋಲ್ ಬಾಂಬ್, ಕಲ್ಲು ತೂರಾಟ ಮಾಡಲಾಗಿದೆ. ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗಿದೆ ಎಂದರು.
ಇತ್ತಿಚೆಗೆ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜ್ಯದಲ್ಲಿ ಗಲಭೆ ನಡೆಯುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದರು. ಅದರಂತೆ ಪಾಕಿಸ್ತಾನ ಮನಸ್ಥಿತಿಯ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಮಸೀದಿ ಇರುವಲ್ಲಿ ಗಣಪತಿ ಹೋಗಬಾರದು ಎಂಬ ನಿಯಮವಿಲ್ಲ. ಮೆರವಣಿಗೆ ಮಾಡಬೇಕಾದರೇ ಪೂರ್ವದಲ್ಲಿ ಅನುಮತಿ ಪಡೆಯಲಾಗಿರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಇವರ ರಕ್ಷಣೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ಓಲೈಕೆ ರಾಜಕಾರಣ ಮಾಡುತ್ತಲೇ ಬರುತ್ತಿದೆ. ಅದು ಮುಂದುವರೆದಿದೆ ಅಷ್ಟೇ. ಯಾರು ಹಿಂದೂಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಂಥವರನ್ನು ಬಂಧಿಸುವ ಕೆಲಸ ನಡೆಯಬೇಕೆಂದು ಈಶ್ವರಪ್ಪ ಆಗ್ರಹಿಸಿದರು.
ಪುನಃ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ತವರು ಮನೆಗೆ ಹೋಗದೇ ಇರುವ ಹೆಣ್ಣು ಮಗಳು ಯಾರಾದರೂ ಇದ್ದಾರಾ? ಹಾಗೇಯೇ ಪಕ್ಷದಲ್ಲಿನ ಸಮಸ್ಯೆಗಳು ಸರಿಯಾದ ಮೇಲೆ ಪುನಃ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಆದರೆ ಕಾದು ನೋಡೋಣ ಎಂದು ಅವರು ತಿಳಿಸಿದರು.
ಸಿಎಂ ಕುರ್ಚಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ದೊಡ್ಡ ಪಟ್ಟಿಯೇ ಬೆಳೆದಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ಬಿಟ್ಟು ಕೊಡೋಲ್ಲ. ಕಾಂಗ್ರೆಸ್ ನಾಯಕರಲ್ಲಿ ಹೊರಗೆ ಬೆಂಬಲ ಬಂದರೆ ಒಳಗೆ ಹಂಬಲವಿದೆ. ಆರ್.ವಿ ಯಿಂದ ಹಿಡಿದು ಎಲ್ಲರೂ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಕೇಂದ್ರ ನಾಯಕರ ಹೇಳಿಕೆಗೆ ಇಲ್ಲಿ ಬೆಲೆಯಿಲ್ಲದಂತಾಗಿದೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಕಾಂತೇಶ ಈಶ್ವರಪ್ಪ ಸೇರಿದಂತೆ ಮೊದಲಾದವರು ಇದ್ದರು.