ನೀರಿನ ಸಮಸ್ಯೆ ಪರಿಹಾರಕ್ಕೆ ಚರ್ಚೆ
ಲಕ್ಷ್ಮೇಶ್ವರ, ಸೆ12: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿರುವ ನೀರಿನ ಸಮಸ್ಯೆಯ ಕುರಿತು ಮಹಿಳೆಯರು ಪುರಸಭೆಯ ಮುಂದೆ ಸಮರ್ಪಕ ನೀರು ಬಿಡುವಂತೆ ಒತ್ತಾಯ ಪಡಿಸಿ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಪುರಸಭೆಯ ಅಧಿಕಾರಿಗಳೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮತ್ತು ಎಲ್ಲಿ ಅಡ್ಡಿ ಆತಂಕಗಳು ಬರುತ್ತಿವೆ ಎಂಬುದನ್ನು ಸ್ವತಃ ಶಾಸಕರು ಅಧಿಕಾರಿಗಳು ಚರ್ಚಿಸಿದರು.
ಆದರೆ ಉಪನಾಳ ಪಾರ್ಕಿನಲ್ಲಿ ನಿರ್ಮಿಸಿರುವ ಜಲಗಾರಕ್ಕೆ ಏಕೆ ನೀರು ತುಂಬಿಸುತ್ತಿಲ್ಲ ಎಂಬ ಪ್ರಶ್ನೆಗೆ ಮುಖ್ಯ ಅಧಿಕಾರಿ ಮಹೇಶ್ ಹಡಪದ ಅವರು ಸಮಸ್ಯೆಗಳನ್ನು ಬಿಚ್ಚಿಟ್ಟರು ಆಗ ಉಪನಾಳ ಪಾರ್ಕಿನ ಮಾಲೀಕರಾದ ಉಪನಾಳ ಪುಲಕೇಶ್ ಅವರು ಜಲಗಾರಕ್ಕೆ ನೀರು ಬಿಡಲು ತಮ್ಮದೇನು ಅಭ್ಯಂತರವಿಲ್ಲ ಆದರೆ ಪರಿಹಾರಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.
ಆದರೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಶಾಸಕ ಚಂದ್ರು ಲಮಾಣಿ ಅವರು ಎರಡು ಯೋಜನೆಗಳು ಸರಕಾರದ ಮುಂದಿವೆ. ಒಂದು ಮುಂಡರಗಿ ತಾಲೂಕಿನ ಹಮಗಿ ಬ್ಯಾರೇಜನ ಬಳಿ ಜಾಕ್ ವೆಲ್ ನಿರ್ಮಿಸಿ ಅಲ್ಲಿಂದ ನೀರು ತರುವ 80 ಕೋಟಿ ಯೋಜನೆ ಒಂದಾಗಿದ್ದರೆ ಇನ್ನೊಂದು ಈಗಾಗಲೇ ಸೂರಣಗಿಯಿಂದ ಲಕ್ಷ್ಮೇಶ್ವರದವರಿಗೆ 33 ಕೋಟಿ ರೂ ವೆಚ್ಚದಲ್ಲಿ ಹೊಸ ಪೈಪು ಜೋಡಿಸಲು ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಂಪೂರ್ಣ ಯೋಜನಾ ವೆಚ್ಚ ವರದಿಯನ್ನು ಅಂದರೆ ಡಿಪಿ ಆರ್ ಸಿದ್ಧಗೊಳಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿ ಮಹೇಶ್ ಹಡಪದ ಸದಸ್ಯರಾದ ಪ್ರವೀಣ್ ಬಾಳಿಕಾಯಿ ಮಾದೇವಪ್ಪ ಅಣ್ಣಿಗೇರಿ ನೀಲಪ್ಪ ಹತ್ತಿ ಮತ್ತು ಪುರಸಭೆಯ ಸಿಬ್ಬಂದಿ ಇದ್ದರು.