ಆತ್ಮಹತ್ಯೆ ಪ್ರಕೃತಿಗೆ ವಿರುದ್ಧ:ನ್ಯಾ ಅಬ್ದುಲ್ ರಹೀಮಾನ ಎ.ನಂದಗಡಿ
ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.12: ಹುಟ್ಟು, ಸಾವು  ಪ್ರಕೃತಿಗೆ ಸಂಬಂಧಿಸಿದ್ದು ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಪ್ರಕೃತಿಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮಾನ ಎ.ನಂದಗಡಿ ಹೇಳಿದರು.
ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಯಾವುದೇ ಸಮಸ್ಯೆ ಶಾಶ್ವತವಲ್ಲ್ಲ ಎಂಬ ಸರಳ ಸತ್ಯವನ್ನು ಅರಿಯಬೇಕು. ಸಮಸ್ಯೆಗಳ ಬಗ್ಗೆ ಸ್ನೇಹಿತರು ಬಂಧುಬಳಗ ಅವರೊಂದಿಗೆ ಹಂಚಿಕೊಳ್ಳುಬೇಕು ಆಗ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ ಎಂದರು.
ಯುವಜನರು ದೇಶದ ಶಕ್ತಿ. ಭವ್ಯ ಭಾರತ ನಿರ್ಮಾಣದ ಹೊಣೆ ಯುವಕರ ಮೇಲಿದೆ. ಯುವಕರ ಜೀವನ ಹಾಳಾದರೆ ದೇಶದ ಬೆಳವಣಿಗೆಗೆ ಕಂಠಿತವಾಗುತ್ತದೆ. ಆತ್ಮಹತ್ಯೆಯಿಂದ ನಿಮ್ಮ ಜೀವನದ ಜೊತೆ ನಿಮ್ಮ ಕುಟುಂಬದ ನೆಮ್ಮದಿಯನ್ನು ಸಹ ಕಸಿದುಕೊಳ್ಳುತ್ತೀರಿ ಎಂದರು.
ವಿದ್ಯಾರ್ಥಿ ಹಂತವು ಗೋಲ್ಡನ್ ಲೈಫ್‍ನಂತೆ. ಇದನ್ನು ಯಾರು ಸಹ ಹಾಳು ಮಾಡಿಕೊಳ್ಳಬಾರದು. ನಿಮ್ಮ ಸ್ನೇಹಿತರು ಜೀವನದ ಬಗ್ಗೆ ನಿರಾಸಕ್ತಿ ಹೊಂದಿದ್ದರೆ ಅದನ್ನು ಗುರುತಿಸಿ ಸರಿಪಡಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನೀವು ಅವರ ಆಲೋಚನೆಗಳನ್ನು ಬದಲಾಯಿಸಬೇಕು. ಸ್ನೇಹಿತರು, ಫ್ಯಾಮಿಲಿ, ಶಿಕ್ಷಕರು ಸೇರಿದಂತೆ ಎಲ್ಲರೂ ನಿಮ್ಮ ಜೊತೆಗೆ ಇರುತ್ತಾರೆ. ಅವರ ಜೊತೆ ಹೆಚ್ಚಾಗಿ ನಿಮ್ಮ ಸಮಯವನ್ನು ಕಳೆಯಿರಿ ಎಂದು ಸಲಹೆ ನೀಡಿದರು.
ಡಾ.ಸೋಮಶೇಖರ ಕೆ. ಮಾತನಾಡಿ, ಪ್ರತಿ ವರ್ಷ ವಿಶ್ವದಲ್ಲಿ 1.70 ಲಕ್ಷ ಜನರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಶೇ.70 ಪುರುಷರು ಹಾಗೂ ಶೇ.30 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಾನಸಿಕ ಖಿನ್ನತೆ. ಅನುವಂಶಿಕವಾಗಿಯೂ ಮಾನಸಿಕ ಖಿನ್ನತೆ ಬರುತ್ತದೆ. ಮಾನಸಿಕ ಖಿನ್ನತೆ ಬರಲು ಮುಖ್ಯ ಕಾರಣ ತಂದೆ ಅಥವಾ ತಾಯಿ ಇಲ್ಲದಿರುವುದು. ಮನೆಯಲ್ಲಿ ಕೌಟುಂಬಿಕ ಕಲಹಗಳಿಂದ, ಮಾದಕ ಪದಾರ್ಥಗಳಿಂದ, ಮೊಬೈಲ್‍ಗಳಿಂದ ಸಾಲಬಾಧೆ ಹಾಗೂ ಜೂಜು ಸೇರಿದಂತೆ ಹಲವಾರು ಕಾರಣಗಳಿಂದ ಎಂದು ತಿಳಿಸಿದರು.
ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮುಖ್ಯವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ, ನಡೆದಾಡುವುದರಿಂದ ಪುಸ್ತಕ ಓದುವುದರಿಂದ ಹಾಗೂ ಧ್ಯಾನ ಮಾಡುವುದರಿಂದ ಕೂಡ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹೇಮಲತಾ ಬಿ. ಹುಲ್ಲೂರ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ್, ಅಪರ ಸಿವಿಲ್ ನ್ಯಾಯಾಧೀಶರಾದ ಅಶೋಕ ಆರ್.ಹೆಚ್., 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ ಕುಮಾರ್ ಜಿ., 3ನೇ ಅಪರ ಸಿವಿಲ್ ನ್ಯಾಯಾಧೀಶರಾದ ಚೈತ್ರ. ಜೆ., ವಕೀಲರ ಸಂಘದ ಅಧ್ಯಕ್ಷರಾದ ಕೆ. ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪಿ. ಶ್ರೀನಿವಾಸಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಆರ್.ಸಿ.ಹೆಚ್ ಅಧಿಕಾರಿ ಡಾ.ಜಂಬಯ್ಯ,  ಆರಕ್ಷಕ ನಿರೀಕ್ಷಕರಾದ ಜಯಲಕ್ಷ್ಮೀ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಶ್, ಆರೋಗ್ಯ ಶಿಕ್ಷಣಾಧಿಕಾರಿ ಡಾ.ದೊಡ್ಡಮನಿ ಎಂ.ಪಿ,  ಡಾ.ರಾಧಿಕಾ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.