ಮಾನವ ಸರಪಳಿ ಯಶಸ್ವಿಗೊಳಿಸಿ
ಚನ್ನಮ್ಮನ ಕಿತ್ತೂರು, ಸೆ12: ಸೆಪ್ಟಂಬರ 15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಅರ್ಥಪೂರ್ಣ ಮತ್ತು ಅಚ್ಚುಕಟ್ಟಾಗಿ ಹಮ್ಮಿಕೊಂಡು ಯಶಸ್ವಿಗೊಳಿಸುವಂತೆ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸೆಪ್ಟಂಬರ 15 ರಂದು ಬೆಳಿಗ್ಗೆ 9.30 ರಿಂದ 10.30ಕ್ಕೆ ರಾಜ್ಯ ಸರ್ಕಾರ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ದರಿಂದ ಕಿತ್ತೂರ ತಾಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ 30ಸಾವಿರಕ್ಕೂ ಹೆಚ್ಚು ಜನ ಸೇರಿ 26 ಕಿಮೀ. ಮಾನವ ಸರಪಳಿ ನಿರ್ಮಿಸಲಾಗುವುದು. ಈ ಸರಪಳಿ ಶಿವಾ ಪೆಟ್ರೋಲ್ ಪಂಪ್‍ದಿಂದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮಾರ್ಗ ಎಂ.ಕೆ.ಹುಬ್ಬಳ್ಳಿ ಸರ್ವಿಸ್ ರಸ್ತೆ ಮಾರ್ಗವಾಗಿ ಮುತ್ನಾಳ ಗ್ರಾಮದ ಸರ್ವಿಸ್ ರಸ್ತೆವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು.
ಪ್ರತಿ ಕಿಮೀ.ಗೆ ಒಬ್ಬರು ನೋಡಲ್ ಅಧಿಕಾರಿ ನೇಮಿಸಿ ಚನ್ನಮ್ಮನ ವೃತ್ತದಲ್ಲಿ ತೋರಣ ಬ್ಯಾನರ್ ಹಾಕಿಸಿ ಸಂವಿಧಾನದ ಪೀಠಿಕೆ ಓದಿಸಿ ರಾಷ್ಟ್ರಗೀತೆ ಹಾಡಿಸಬೇಕು. ಸರಪಳಿ ಹಾದು ಹೋಗುವ ವಾಹನ ದಟ್ಟಣೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನವಹಿಸಿ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ತಾಲೂಕಾಡಳಿತದಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು. ಅಶಪಾಕ ಹವಾಲ್ದಾರ, ಸುನೀಲ್ ಘೀವಾರಿ, ಕೃಷ್ಣಾ ಬಾಳೇಕುಂದರಗಿ, ತಾಲೂಕಿನ ಎಲ್ಲ ಅಧಿಕಾರಿಗಳು ಇನ್ನಿತರರಿದ್ದರು.