ದಿಶಾ ಸಭೆ:ಇಲಾಖೆಗಳ ಪ್ರಗತಿ ಪರಿಶೀಲನೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.12: ವಿಜಯನಗರ ಜಿಲ್ಲೆ ಕುರಿತು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದ ಇ ತುಕಾರಾಂ ಸತತ ಎಂಟು ಗಂಟೆಗಳ ಕಾಲ ನಡೆಸಿ, ಅಧಿಕಾರಿಗಳಿಗೆ ಶಿಕ್ಷಕರಂತೆ ಪಾಠ ಮಾಡಿದರು.
ಪ್ರತಿಯೊಂದು ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಂಸದರಾದ ಈ ತುಕಾರಾಮ್ ಅವರು, ಆಯಾ ಇಲಾಖೆಗಳ ಯೋಜನೆಗಳ ಮಹತ್ವ, ಆಯಾ ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ವಹಿಸಬೇಕಾದ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಕೆಲಸ ಮಾಡಬೇಕು ಎನ್ನುವ ಹೃದಯವಂತಿಕೆ ಇರಬೇಕು. ಹಾಗಾದಾಗ ಮಾತ್ರ ಎಲ್ಲ ಕೆಲಸಗಳಾಗುತ್ತವೆ ಎಂದು ಶಿಕ್ಷಕರಂತೆ ಅಧಿಕಾರಿಗಳಿಗೆ ಪಾಠ ಮಾಡಿದರು.
ಪಡಿತರ ಅಕ್ಕಿ ಸರಬರಾಜು ಪಾರದರ್ಶಕವಾಗಿ ಆಗಬೇಕು ಎಂದು ಸಭೆಯಲ್ಲಿ ಶಾಸಕರು ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಅನ್ನಭಾಗ್ಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ತಿನ್ನುವ ಅನ್ನಕ್ಕೆ ಯಾರು ಸಹ ಕನ್ನ ಹಾಕುವ ಕೆಲಸ ಮಾಡಬಾರದು. ಎಲ್ಲಾ ಕಡೆಗೆ ಅಕ್ಕಿ ಸರಬರಾಜು ಪಾರದಶರ್ಕವಾಗಿ ನಡೆಯಬೇಕು. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುವ ಬಗ್ಗೆ ದೂರುಗಳು ಕೇಳಿ ಬಂದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿ ಅಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುಂತಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಗಳು ಹಳ್ಳಿಗಳಿಗೆ ಜೀವನಾಡಿಯಿದ್ದಂತೆ. ವಿಜಯನಗರ ಜಿಲ್ಲೆಯ ಎಲ್ಲಾ ಕಡೆಗಿನ ಕೆರೆಗಳ ಪುನಶ್ಚೇತನವಾಗಬೇಕು. ಈ ನಿಟ್ಟಿನಲ್ಲಿ ಯಾವ ಕಡೆಗಳಲ್ಲಿ ಕೆರೆಗಳನ್ನು ನಿರ್ಮಿಸಲು ಅವಕಾಶವಿದೆ ಎಂಬುದರ ಬಗ್ಗೆ ಶಾಸಕರಿಗೆ ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯ, ಬಸವ ಸೇರಿದಂತೆ ಮಹತ್ವದ ವಿಜಯನಗರ ಕಾಲುವೆಗಳು, ಮಾನವಿ ಕಾಲುವೆಗಳು ಸೇರಿದಂತೆ ವಿಜಯನಗರ ಜಿಲ್ಲಾ ವ್ಯಾಪ್ತಿಯ ಎಲ್ಲ ಕಾಲುವೆಗಳ, ಆಯಾ ಕಾಲುವೆಗಳ ಗೇಟಗಳ ದುರಸ್ಥಿಗೆ  ಶಿಸ್ತುಬದ್ಧವಾದ ಮಾಸ್ಟರ್ ಪ್ಲಾನ್ ಮಾಡಿ ಸಲ್ಲಿಸಲು ಇದೆ ವೇಳೆ ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಕೆರೆಗಳನ್ನು ತುಂಬಿಸುವುದಕ್ಕೆ ಇದೀಗ ಪೈಪ್‍ಗಳು ದುರಸ್ತಿಗೆ ಬಂದಿರುವುದು ಅಡಚಣೆಯಾಗಿ ಪರಿಣಮಿಸಿದೆ. ಜೆಸ್ಕಾಂಗೆ 11 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುವುದು ಬಾಕಿ ಇದೆ ಎಂದು ಸಂಬಂಧಿಸಿದ ಅಭಿಯಂತರರು ಸಭೆಗೆ ತಿಳಿಸಿದರು. ಸಿಂಗಟಾಲೂರ ಯೋಜನೆಗೆ ಸಂಬಂಧಿಸಿದಂತೆ ಪೈಪುಗಳ ದುರಸ್ಥಿಯ ವೆಚ್ಚ? ಕಾಲುವೆಗಳ ದುರಸ್ಥಿ ವೆಚ್ಚ? ಬಾಕಿ ವಿದ್ಯುತ್ ಬಿಲ್ ವಿವರ, ಮೋಟರ್ ಪಂಪ್ ರಿಪೇರಿ, ಟಿಸಿಗಳ ಅಳವಡಿಕೆ ಸೇರಿದಂತೆ ಸಮಗ್ರ ವಿವರ ಸಲ್ಲಿಸಲು ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಗಂಗಾಕಲ್ಯಾಣ ಯೋಜನೆಯಡಿಯ ಪಂಪಸೆಟ್‍ಗಳಿಗೆ ವಿದ್ಯುತ್ ಸರಬರಾಜು ಬಾಕಿ ಇದ್ದಲ್ಲಿ ಕೂಡಲೇ ಸರಬರಾಜು ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಹ ವಿದ್ಯುತ್ ಸಂಪರ್ಕವನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ಎಲ್ಲ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ವಸತಿ ಸೌಕರ್ಯ ಸಿಗಬೇಕು. ಹಾಸ್ಟೇಲ್‍ಗಳ ಬೇಡಿಕೆಯಿದ್ದರೆ ತಾಲೂಕುವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಬಸ್ ಸೌಕರ್ಯ: ಜಿಲ್ಲೆಯ ಪ್ರತಿಯೊಂದು ಹಳ್ಳಿಗೆ ಬಸ್‍ಗಳು ಸಂಚರಿಸಬೇಕು. ವಿದ್ಯಾರ್ಥಿಗಳು ಬಸ್ ಕೇಳಿದಲ್ಲಿ ಯಾವುದೇ ಸಮಜಾಯಿಸಿ ಹೇಳದೇ ಕೂಡಲೇ ಬಸ್ ಬಿಡಬೇಕು. ಜಿಲ್ಲೆಯಲ್ಲಿ ಎಷ್ಟು ವಾಹನಗಳು ಸುಸ್ಥಿತಿಯಲ್ಲಿವೆ.? ಎಷ್ಟು ವಾಹನಗಳು ದುಸ್ಥಿತಿಯಲ್ಲಿವೆ? ಹೊಸದಾಗಿ ಎಷ್ಟು ವಾಹನಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ಕೂಡಲೇ ವರದಿ ನೀಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಹವಾಲು ಪರಿಶೀಲನೆ:ಸಭೆಗೆ ಸ್ವೀಕೃತವಾದ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳ ಹಂತದಲ್ಲಿ ವಿಲೇವಾರಿಯಾಗುವ ಅರ್ಜಿಗಳನ್ನು ಖುದ್ದು ತಾವೇ ಓದಿ ಹೇಳಿ ಕೆಲ ಅರ್ಜಿಗಳನ್ನು ಸ್ಥಳದಲ್ಲಿಯೇ ವರ್ಗಾಯಿಸಿದರು.ಉಳಿದ ಕೆಲ  ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಅಧಿಕಾರಿಗಳು ಪರಿಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಸಚಿವರು, ಸಂಸದರು, ಶಾಸಕರ ಸಭೆಗಳಿಗೆ ತಪ್ಪದೆ ಹಾಜರಾಗಬೇಕು. ಅನುಮತಿ ಪಡೆಯದೇ ಗೈರಾಗಬಾರದು. ಶಿಷ್ಠಾಚಾರ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ.ಶ್ರೀನಿವಾಸ, ಎಲ್.ಕೃಷ್ಣ ನಾಯ್ಕ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ರಮ ಅವರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಸುದೀರ್ಘ ಚೆರ್ಚೆ ನಡೆಯಿತು.
ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣಪ್ಪ, ಸಹಾಯಕ ಆಯುಕ್ತರಾದ ವಿವೇಕಾನಂದ ಪಿ., ಚಿದಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮ್ಪಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಜೆ.ಎಂ. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.