ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.12 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15 ರಂದು ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ತಾಪಂ ಇಒ   ಜಿ. ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ದಿನಾಚರಣೆಯ ನಿಮಿತ್ತ ಬೀದರ್ ನ ಬಸವಕಲ್ಯಾಣದಿಂದ ಚಾಮರಾಜನಗರದವರೆಗೂ ಸುಮಾರು 2400 ಕಿಲೋಮೀಟರ್ ಉದ್ದದ ಮಾನವ ಸರಪಳಿಯ ನಿರ್ಮಿಸಲಾಗುತ್ತಿದ್ದು. ಈ ಸರಪಳಿಯೂ ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮುನಿರಾಬಾದ್ ಸೇತುವೆಯ ಬಳಿ ಇರುವ ಶ್ರೀ ಗಣೇಶನ ದೇವಸ್ಥಾನದಿಂದ ಪ್ರಾರಂಭಿಸಿ ತೋರಣಗಲ್ಲ ಹತ್ತಿರ ಇರುವ ಭುವನಹಳ್ಳಿಯ ವರೆಗೆ 49 ಕಿಲೋಮೀಟರ್ ಉದ್ದದ ಮಾನವ ಸರಪಳಿ ರಚಿಸಲಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್  ಡೊಳ್ಳಿನ್  ಮಾತನಾಡಿ ಈ ಒಂದು ಮಾನವ ಸರಪಳಿಯಲ್ಲಿ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಮುರಾರ್ಜಿ ಶಾಲೆಯ 8ನೇ ತರಗತಿಯಿಂದ 10ನೇ ತರಗತಿ ಮಕ್ಕಳು ಮಾನವ ಸರಪಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಜವಾಬ್ದಾರಿಯಿಂದ ಕರೆತರಲಾಗುವುದು. ಜಿಲ್ಲಾಧಿಕಾರಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆವನ್ನು  ಮಾಡಿದ್ದಾರೆ. ಬೆಳಗ್ಗೆ 8:30 ರಿಂದ 9:30ರವರಿಗೆ ನಡೆಯಲಿದೆ.ಒಂದು ತಾಸಿನಲ್ಲಿ ಕಾರ್ಯಕ್ರಮ ಮುಗಿಯಲಿದೆ. ಇದೊಂದು ಐತಿಹಾಸಿಕವಾಗಿದ್ದು ಇದರಲ್ಲಿ ಸಂಘ ಸಂಸ್ಥೆಯ ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್  ಶಿವಕುಮಾರ್ ಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ, ಪುರಸಭೆಯ ವ್ಯವಸ್ಥಾಪಕ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಪುರುಷೋತ್ತಮ್, ಡಾ.ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ದೊಡ್ಡಬಸಪ್ಪ ಹಾಗೂ  ಹಲವು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.