ಚಾ.ಬೆಟ್ಟ ಪ್ರಾಧಿಕಾರ ರಚನೆ ಅವಶ್ಯಕತೆ ಇದೆ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.12:– ಚಾಮುಂಡಿಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ಹಾಗೂ ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ ಎನ್ನುವ ಮೂಲಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ವಿರೋಧ ವ್ಯಕ್ತಪಡಿಸಿರುವ ರಾಜಮನೆತನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ನಾವು ಕೆಲವು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರವೇ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ಹಾಗೂ ಕೆಲವು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ. ಬೆಟ್ಟಕ್ಕೆ ಪೆÇಲೀಸ್ ಠಾಣೆ ಹಾಗೂ ಆಸ್ಪತ್ರೆಯ ಅವಶ್ಯತೆ ಇದ್ದು, ಇದೆಲ್ಲ ನಿರ್ಮಾಣವಾಗಲು ಪ್ರಾಧಿಕಾರದ ಅಗತ್ಯ ಇದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಇದೀಗ ಸಿದ್ದರಾಮಯ್ಯ ಅವರು ಪ್ರಾಧಿಕಾರ ರಚನೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಚಾಮುಂಡಿಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ನಾನು ಆಸ್ತಿ ಹೊಡೆದಾಟದ ಬಗ್ಗೆ ಮಾತನಾಡುವುದಿಲ್ಲ. ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾದ್ದು ಸರ್ಕಾರದ ಕರ್ತವ್ಯ. ಅಮೃತ್ ಯೋಜನೆ ಕುಡಿಯುವ ನೀರು ಬೆಟ್ಟಕ್ಕೆ ತಲುಪದಿರಲು ಕಾರಣ ಯಾರು? ಎಂದು ಪ್ರಶ್ನೆ ಮಾಡಿದ ಅವರು, ನಾನು ಹೇಳಿದರೆ ಕಾಂಟ್ರವರ್ಸಿ ಆಗುತ್ತೆ, ಪೈಪ್‍ಲೈನ್ ಎಲ್ಲಿ ತಡೆದು ನಿಂತಿದೆ ಎಂಬುದನ್ನು ನೀವೆ ಹುಡುಕಿ ಎಂದು ಹೆಸರು ಹೇಳದೇ ಸಂಸದ ಯದುವೀರ್ ಒಡೆಯರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಚಾಮುಂಡಿಬೆಟ್ಟದಲ್ಲಿ 12 ಮುಸ್ಲಿಂ ಷಾಪ್ ಇತ್ತು. ಹಿಂದೂಗಳು ಭಕ್ತಿಯಿಂದ ಹೋಗುವ ಜಾಗದಲ್ಲಿ ಇವರೇಕೆ ಅಂಗಡಿ ಇಡಬೇಕು. ಮುಜರಾಯಿ ಕಾನೂನಿನಲ್ಲಿ ಕೂಡ ಇದಕ್ಕೆ ಅವಕಾಶ ಇಲ್ಲವೆಂದು ಮುಸ್ಲಿಂ ಅಂಗಡಿಗಳನ್ನು ತೆಗೆಸಿದ್ದೆ. ಚಾಮುಂಡೇಶ್ವರಿಗೆ ಅವಮಾನಿಸುವಂತಿದ್ದ ಮಹಿಷ ದಸರಾ ತಡೆಯುವ ಕೆಲಸ ಮಾಡಿದೆ. ಆದರೆ ಚಾಮುಂಡಿ ತಾಯಿಗೆ ಅನ್ಯಾಯವಾಗುವಂತೆ ಮಾತನಾಡಿಲ್ಲ.
-ಪ್ರತಾಪ್ ಸಿಂಹ, ಮಾಜಿ ಸಂಸದ.