ವೈಭವದ ಗಣೇಶನ ಸಾಮೂಹಿಕ ವಿಸರ್ಜನೆ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.12:- ನಗರದಾದ್ಯಂತ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಬುಧವಾರ ಭವ್ಯ ಮೆರವಣಿಗೆಯ ಮೂಲಕ ಸಾಮೂಹಿಕ ವಿಸರ್ಜನೆ ಮಾಡಲಾಯಿತು. ಇದರಿಂದ ಒಂದೇ ದಿನ ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಭಾಗದ್ವಜ ರಾರಾಜಿಸಿತು. ನಗರದ ವಿವಿಧ ಬಡಾವಣೆಗಳಿಂದ ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ನಡೆಸಿದ ಭÀಕ್ತರು, ಕೊನೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡರು. ಸಾವಿರಾರು ಜನರು ಈ ಸಂದರ್ಭ ಜಮಾವಣೆಗೊಂಡ ಹಿನ್ನೆಲೆ ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮೆರವಣಿಗೆಯಲ್ಲಿ ಬೃಹತ್ ಹಾಗೂ ಸುಂದರ, ವಿಭಿನ್ನ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆದವು.
ವೀರನಗೆರೆಯಿಂದ ಆರಂಭವಾದ ಭವ್ಯ ಮೆರವಣಿಗೆ ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಗಣೇಶನ ಮೂರ್ತಿ ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಬಂದು ಸೇರಿದ ಎಲ್ಲಾ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೆರವಣಿಗೆಯಲ್ಲಿ ನೂರಾರು ಗಣೇಶ ಮೂರ್ತಿಗಳೊಂದಿಗೆ ಸಾವಿರಾರು ಯುವಕರು ಭಾಗವಹಿಸಿದ್ದರು. ವೀರಗಾಸೆ, ನಾದಸ್ವರ, ತಮಟೆ, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಮತ್ತು ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಬಳಿಕ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಕೊನೆಗೆ ಶ್ರೀರಂಗಪಟ್ಟಣ್ಣದ ಕಾವೇರಿ ನದಿಯಲ್ಲಿ ಎಲ್ಲಾ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಈ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ಸುಮಾರು ಐದು ದಿನಗಳ ಕಾಲ ಗೌರಿ-ಗಣೇಶನನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ, ಐದು ದಿನಗಳು ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಪ್ರಮುಖ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ಹಾಗೂ ಕೋಟೆ ಆಂಜನೇಯ ದೇವಸ್ಥಾನ ಆವರಣಗಳು ಕೇಸರಿ ಭಾಗವ ಧ್ವಜಗಳೊಂದಿಗೆ ಕಂಗೊಳಿಸುತ್ತಿದ್ದವು. ಬೃಹತ್ ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪಾ ಮೋರಯ, ಮಂಗಳ ಮೂರ್ತಿ ಮೋರಯ ಎಂಬ ಘೋಷಣೆಗಳು ಮೊಳಗಿದವು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.