ಆಧಾರ್ ಜೋಡಣೆ ನಿಲ್ಲಿಸುವಂತೆ ರೈತಸಂಘ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.12: ರೈತರಿಗೆ ಅಗತ್ಯವಾದ ವಿದ್ಯುತ್ ಪರಿವರ್ತಕಗಳನ್ನು ನೀಡಲು ರೈತರ ವಿದ್ಯುತ್ ಮೀಟರುಗಳ ಆರ್.ಆರ್ ನಂಬರಿಗೆ ಆಧಾರ್ ಜೋಡಣೆ ಮಾಡುವಂತೆ ತಾಲೂಕಿನ ವಿದ್ಯುತ್ ಇಲಾಖೆಯ ನೌಕರರು ರೈತರಿಗೆ ಅನಗತ್ಯ ಒತ್ತಡ ಹಾಕುತ್ತಿದ್ದು ತಕ್ಷಣವೇ ಇದನ್ನು ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಸೆಸ್ಕಾಂ ಉಪ ವಿಭಾಗದ ಕಛೇರಿಗೆ ಆಗಮಿಸಿದ್ದ ಸೆಸ್ಕಾಂ ಜಿಲ್ಲಾ ಕಾರ್ಯಪಾಲಕ ಅಭಿಯಂತರ ರಮೇಶ್ ಅವರನ್ನು ಭೇಟಿ ಮಾಡಿದ ರೈತರು ಆರ್.ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆಯನ್ನು ಕೈಬಿಡುವಂತೆ ಆಗ್ರಹಿಸಿದರು.
ಸುಟ್ಟು ಹೋದ ಟಿ.ಸಿಯನ್ನು ಬದಲಿಸಿಕೊಡಲು ಇಲಾಖೆಯ ಸೆಕ್ಷನ್ ಆಫೀಸರುಗಳ ಬಳಿ ಹೋದರೆ ಅವರು ಆರ್.ಆರ್ ನಂಬರಿಗೆ ಅಧಾರ್ ಲಿಂಕ್ ಆಗಿದ್ದರೆ ಮಾತ್ರ ಟಿ.ಸಿ.ಬದಲಿಸುವುದಾಗಿ ಹೇಳಿ ರೈತರನ್ನು ವಂಚಿಸುತ್ತಿದ್ದಾರೆ. ಸುಟ್ಟು ಹೋದ ಟಿ.ಸಿ ಬದಲಿಸಿಕೊಡಲು ಆಧಾರ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಎಲ್ಲಿದೆ? ಎಂದು ಪ್ರಶ್ನಿಸಿದ ರೈತರು ವಿದ್ಯುತ್ ಇಲಾಖೆಯಲ್ಲಿ ನಡೆಯುತ್ತಿರುವ ರೈತರ ಸುಲಿಗೆ ನಿಲ್ಲಬೇಕೆಂದು ಒತ್ತಾಯಿಸಿದರು.
ತಾಲೂಕಿನ ಬಹುತೇಕ ಕಡೆ ವಿದ್ಯುತ್ ಲೈನ್ ಗಳು ತುಂಡಾಗಿ ಕೆಳಗೆ ಬಿದ್ದು ಅಮಾಯಕ ರೈತರು ಮತ್ತು ಜಾನುವಾರುಗಳು ಬಲಿಯಾಗುತ್ತಿವೆ. ಹಳೆಯ ವಿದ್ಯುತ್ ವಾಹಕಗಳನ್ನು ಬದಲಿಸುತ್ತಿಲ್ಲ. ಸುಟ್ಟು ಹೋದ ಟಿ.ಸಿ.ಗಳನ್ನು ಇಲಾಖೆಯ ವೆಚ್ಚದಲ್ಲಿಯೇ ರಿಪೇರಿ ಮಾಡಿಸಿ ಅಳವಡಿಸಿಕೊಡಬೇಕು. ಆದರೆ ಕೆಲವು ಸಿಬ್ಬಂಧಿಗಳು ಇಲಾಖೆಯ ಮೂಲಕ ಸುಟ್ಟುಹೋದ ಟಿ.ಸಿಗಳನ್ನು ಸರಿಪಡಿಸಿಕೊಡಲು ಸಾಕಷ್ಠು ದಿನ ಬೇಕಾಗುತ್ತದೆಂದು ಸುಳ್ಳು ಹೇಳಿ ಖಾಸಗಿಯವರ ಬಳಿಗೆ ರೈತರನ್ನು ಕಳುಹಿಸಿ ಸುಲಿಗೆ ಮಾಡುತ್ತಿದ್ದಾರೆ. ಓ.ಸಿ ರಿಪೇರಿ ಹೆಸರಿನಲ್ಲಿ ನಡೆಯುತ್ತಿರುವ ರೈತರ ಸುಲಿಗೆ ನಿಲ್ಲಬೇಕು. ತಕ್ಷಣವೇ ಟಿ.ಸಿ.ಸುಟ್ಟುಹೋದರೆ ರೈತರು ಖಾಸಗಿಯವರ ಬಳಿಗೆ ಹೋಗದೆ ಇಲಾಖೆಯನ್ನು ಸಂಪರ್ಕಿಸುವಂತೆ ತಾಲೂಕಿನ ಎಲ್ಲಾ ಸೆಸ್ಕಾಂ ವಿತರಣಾ ಕೇಂದ್ರಗಳ ಮುಂದೆ ನಾಮಫಲಕ ಹಾಕಿಸಬೇಕು ಹಾಗೂ ಲೈನ್‍ಮೆನ್ ಗಳ ಸಭೆ ಕರೆದು ಯಾವುದೇ ಕಾರಣಕ್ಕೂ ಸುಟ್ಟು ಹೋದ ಟಿ.ಸಿಗಳನ್ನು ರಿಪೇರಿಗಾಗಿ ಖಾಸಗಿಯವರ ಬಳಿಗೆ ನೀಡದಂತೆ ಎಚ್ಚರಿಸುವಂತೆ ರೈತರು ಆಗ್ರಹಿಸಿದರು.
ರೈತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತರ ರಮೇಶ್ ಆರ್.ಆರ್ ನಂಬರಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ. ಆದರೆ ಸರ್ಕಾರದ ಸಹಾಯಧನ ಪಡೆಯಬೇಕಾದರೆ ರೈತರ ಆರ್.ಆರ್ ನಂಬರಿಗೆ ಆಧಾರ್ ಲಿಂಕ್ ಆಗಿರಬೇಕು. ಸುಟ್ಟು ಹೋದ ಟಿ.ಸಿ ಗಳನ್ನು 24 ಘಂಟೆಗಳ ಒಳಗೆ ರಿಪೇರಿ ಮಾಡಿಸಿ ಕೊಡಲಾಗುವುದು. ಯಾವುದೇ ಕಾರಣಕ್ಕೂ ಖಾಸಗಿಯರ ಬಳಿಗೆ ಟಿ.ಸಿ.ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಈ ಬಗ್ಗೆ ಇಲಾಖೆಯ ಎಲ್ಲಾ ಸೆಕ್ಷನ್ ಅಫೀಸರುಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.