ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.12: ಶಾಸನಬದ್ದವಾಗಿ ಆಯ್ಕೆಯಾಗಿರುವ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕ ಹೆಚ್.ಟಿ.ಮಂಜು ಆರೋಪಿಸಿದರು.
ಅವರು ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ಬಿ.ಎಂ.ಸಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ನಮ್ಮದೇನು ತಕರಾರಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳ ಈಡೇರಿಕೆ ಮಾತ್ರ ಸರ್ಕಾರದ ಮುಖ್ಯ ಗುರಿಯಾಗಬಾರದು. ಇವುಗಳ ಜೊತೆಗೆ ಕ್ಷೇತ್ರದ ಅಭಿವೃದ್ದಿಗಳಿಗೂ ಹೆಚ್ಚಿನ ಅನುದಾನ ನೀಡಬೇಕು. ಕಳೆದ ಒಂದೂವರೆ ವರ್ಷದಿಂದ ವಿರೋಧ ಪಕ್ಷಗಳನ್ನು ಒಳಗೊಂಡಂತೆ ಆಡಳಿತ ಪಕ್ಷದ ಶಾಸಕರಿಗೂ ಅನುದಾನ ಮರೀಚಿಕೆಯಾಗಿದೆ. ಕ್ಷೇತ್ರದ ಅಭಿವೃದ್ದಿ ಮಾಡಲಾಗದ ಸ್ಥಿತಿ ರಾಜ್ಯದ ಎಲ್ಲಾ ಶಾಸಕರಿಗೂ ಎದುರಾಗಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ನೀಡಬಹುದಾಗಿದ್ದ ಎಲ್ಲಾ ರೀತಿಯ ಅನುದಾನಗಳನ್ನು ಮೊಟಕುಗೊಳಿಸಲಾಗುತ್ತಿದೆ. ಇದರಿಂದಾಗಿ ಕ್ಷೇತ್ರದ ಮತದಾರರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ತಾಲ್ಲೂಕಿನಾದ್ಯಂತ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. 2-3 ವರ್ಷಗಳ ಹಿಂದೆ ಒಡೆದು ಹೋಗಿರುವ ಕೆರೆಗಳ ಏರಿಗಳನ್ನು ನಿರ್ಮಾಣ ಮಾಡಲಾಗದ ಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಸಚಿವರ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂದರೆ ಸರ್ಕಾರ ಎಷ್ಟರಮಟ್ಟಿಗೆ ಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡುತ್ತಿದೆ ಎಂಬುದನ್ನು ನೀವೇ ನಿರೀಕ್ಷಿಸಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ತುರ್ತು ಕೆಲಸಗಳ ಬಗ್ಗೆ ಅನೇಕ ಬಾರಿ ಮನವಿಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಶಾಸಕನಾಗಿ ಆಯ್ಕೆ ಮಾಡಿರುವ ಮತದಾರರೊಂದಿಗೆ ಒಡನಾಟ ಇಟ್ಟುಕೊಂಡು ಲಭ್ಯವಿರುವ ಅನುದಾನವನ್ನು ಬಳಸಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಅನುದಾನ ಇಲ್ಲ ಎಂದು ಕೈಕಟ್ಟಿ ಕೂರುವ ಸೋಮಾರಿ ಶಾಸಕ ನಾನಲ್ಲ.
ವಿಧಾನಸಭಾ ಅಧಿವೇಶನದಲ್ಲಿಯೇ ನಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ತುರ್ತು ಕೆಲಸಗಳ ಬಗ್ಗೆ ಚರ್ಚಿಸಲಿದ್ದೇನೆ. ಹಾಗೂ ಸಚಿವರುಗಳ ಕಛೇರಿಗಳಿಗೆ ಭೇಟಿನೀಡಿ ಮನವೊಲಿಸಲಿದ್ದೇನೆ. ಹೀಗಾಗಿ ಸಲ್ಪಸ್ವಲ್ಪ ಅನುದಾನ ತರುತ್ತಿದ್ದೇನೆ. ಅಲ್ಲದೇ ಕ್ಷೇತ್ರದಾದ್ಯಂತ ಸಂಚರಿಸಿ ಜನಸಾಮಾನ್ಯರ ಸಂಕಷ್ಟಗಳಿಗೆ, ನೋವು ನಲಿವುಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಮನ್ಮುಲ್ ನಿರ್ದೇಶಕ ಡಾಲುರವಿ, ಮಾತನಾಡಿ ಗ್ರಾಮಕ್ಕೆ ಬಹುದಿನಗಳ ಬೇಡಿಕೆಯಾಗಿದ್ದ ಬಿಎಂಸಿ ಕೇಂದ್ರ ಈದಿನ ಉದ್ಘಾಟನೆಯಾಗಿದ್ದು ಸದಸ್ಯರುಗಳು ನಿಮ್ಮ ಗ್ರಾಮಕ್ಕೆ ಬಂದಿರುವ ಬಿಎಂಸಿ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸಹಕಾರ ಸಂಘದ ಅಭಿವೃದ್ದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರುಗಳು, ಸಂಘದ ಸರ್ವಸದಸ್ಯರು, ಸಾರ್ವಜನಿಕರು ಹಾಜರಿದ್ದರು.