ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ
ಕೋಲಾರ,ಸೆ,೧೨- ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವರ ರೀತಿ ದಿಟ್ಟ ಹೋರಾಟಗಾರತಿಯರಾದ ಜಿಲ್ಲೆಯ ಮಹಿಳೆಯರು ನಾಡಿನ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅಭಿಪ್ರಾಯಪಟ್ಟರು.
ಬುಧವಾರ ನಗರಕ್ಕೆ ಭೇಟಿ ನೀಡಿ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿಗಾಗಿ ಹೋರಾಡಿದ ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಂಬಾಡಿ ಮಲ್ಲಮ್ಮ ಹಾಗೂ ಅಬ್ಬಕ್ಕದೇವಿಯರನ್ನು ಚಿನ್ನದ ನಾಡು ಕೋಲಾರದಲ್ಲಿ ಕಂಡು ಅತೀವ ಸಂತೋಷವಾಗಿದೆ ಎಂದು ಕೊಂಡಾಡಿದರು.
ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಪುರುಷರೇ ಸ್ವಾಗತಿಸುತ್ತಾರೆ.
ಆದರೆ, ಹೋರಾಟಕ್ಕೆ ನಾಂದಿ ಹಾಡಿದ ಕೋಲಾರ ಜಿಲ್ಲೆಯ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಇಂದು ನನ್ನನ್ನು ಸ್ವಾಗತಿಸಿ, ಬರಮಾಡಿಕೊಂಡಿದ್ದಾರೆ.
ಸರ್ಕಾರದಿಂದ ಹಾಗೂ ಮಹಿಳಾ ಆಯೋಗದಿಂದ ಅವರಿಗೆ ದೊರಕಬೇಕಾದ ಹಕ್ಕುಗಳನ್ನು ಕೊಡಿಸುವ ಕರ್ತವ್ಯವನ್ನು ನಾನು ಪಾಲಿಸುತ್ತೇನೆ. ನಿಮ್ಮೆಲ್ಲರ ಸಹಕಾರ, ಬೆಂಬಲ ಇದೇ ರೀತಿ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ, ಪಿ.ನಾರಾಯಣಪ್ಪ, ರವೀಂದ್ರನಾಥ್, ಚಂದ್ರು, ಮಹಿಳಾ ಸಂಘಟನೆ ಪದಾಧಿಕಾರಿಗಳಾದ ಜನವಾದಿಮಹಿಳಾ ಸಂಘಟನೆಯ ವಿ. ಗೀತ, ಸರಸ್ವತಮ್ಮ, ಗಮನ ಶಾಂತಮ್ಮ, ಮಮತರೆಡ್ಡಿ, ಕೊಂಡರಾಜನಹಳ್ಳಿ ಮಂಜುಳಾ, ರತ್ನಮ್ಮ, ಮಂಗಳಾ ಮತ್ತಿತರರಿದ್ದರು.